SUDDILIVE || Ripponpete
ಭಾರಿ ಗಾಳಿ-ಮಳೆಗೆ ಬೈಕ್ ಮೇಲೆ ಉರುಳಿದ ಮರ: ಸವಾರನಿಗೆ ಗಂಭೀರ ಗಾಯ-Tree falls on bike due to heavy wind and rain: Rider seriously injured
ಸೋಮವಾರ ರಾತ್ರಿ ಪಟ್ಟಣದಾದ್ಯಂತ ಸುರಿದ ಆಲಿಕಲ್ಲು ಸಹಿತ ಗುಡುಗು ಮಳೆಯಿಂದ ಹಲವು ಅನಾಹುತಗಳು ಸಂಭವಿಸಿದ್ದು, ಬಾಳೂರು ಸಮೀಪದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಉರುಳಿದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಾಳುವನ್ನು ನೇರಲಮನೆ ನಿವಾಸಿ ಚಂದ್ರಶೇಖರ್ (53) ಎಂದು ಗುರುತಿಸಲಾಗಿದೆ. ಅವರು ನೆವಟೂರು ಕಡೆಯಿಂದ ರಿಪ್ಪನ್ ಪೇಟೆ ಕಡೆಗೆ ಬಜಾಜ್ ಡಿಸ್ಕವರ್ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಏಕಾಏಕಿ ಮರ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ತಕ್ಷಣ ಸ್ಥಳೀಯರು ಗಾಯಾಳುವನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಶಿಫಾರಸ್ಸು ಮಾಡಲಾಗಿದೆ.
ಇದೇ ವೇಳೆ, ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಹಲವು ಕಡೆ ಮರಗಳು ಉರುಳಿದ ವರದಿಗಳು ಲಭ್ಯವಾಗಿವೆ. ಮಳೆಯಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತು.
Tree falls on bike due to heavy wind and rain: Rider seriously injured

