SUDDILIVE || SHIVAMOGGA
ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್: ಶಿವಮೊಗ್ಗದಲ್ಲಿ ನಂಜೇಗೌಡ ಎಂಬಾತನ ವಿರುದ್ಧ ಬಿಜಿಪಿ ದೂರು-Post in social media agains PM Modi, complaint lodge bY BJP
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಆರೋಪದ ಮೇಲೆ ನಂಜೇಗೌಡ ಎಂಬ ವ್ಯಕ್ತಿಯ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿಯ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದಿಂದ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತವಾಗಿ ದೂರು ದಾಖಲಿಸಲಾಗಿದೆ.
ದೂರಿನ ವಿವರಗಳ ಪ್ರಕಾರ, ನಂಜೇಗೌಡ ಎಂಬಾತ ತನ್ನ ಫೇಸ್‌ಬುಕ್ (Facebook) ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ದುರ್ಬಳಕೆ ಮಾಡಿಕೊಂಡು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಎಡಿಟ್ ಮಾಡಿದ ಅಶ್ಲೀಲ ಹಾಗೂ ಅವಹೇಳನಕಾರಿ ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ವಿದೇಶಿ ಮಹಿಳಾ ಪ್ರಧಾನಿಯೊಬ್ಬರ ಜೊತೆ ಪ್ರಧಾನಿಯವರ ಫೋಟೋವನ್ನು ತಿರುಚಿ, ಸಮಾಜದಲ್ಲಿ ಶಾಂತಿ ಭಂಗ ತರುವ ಮತ್ತು ರಾಜಕೀಯ ದ್ವೇಷ ಹುಟ್ಟುಹಾಕುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
"AI ಬಂದಿದೆ ಅಂತ ಟೆಕ್ನಾಲಜಿನಾ ನಮ್ಮುದ್ದೂರು ಈ ಮಟ್ಟಕ್ಕೆಲ್ಲಾ ಬೆಡ್ ರೂಮಿಗೇ ಹೋಗಿ ಹೆಸರು ಕೆಡಿಸಬಾರದು..." ಎಂಬ ನಿಂದನಾತ್ಮಕ ಶೀರ್ಷಿಕೆಯೊಂದಿಗೆ ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದ್ದು, ಇದು ದೇಶದ ಪ್ರಧಾನಿ ಹುದ್ದೆಗೆ ಹಾಗೂ ಅವರ ಘನತೆಗೆ ಧಕ್ಕೆ ತರುವಂತಹ ದೇಶದ್ರೋಹದ ಕೆಲಸವಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯ ವತಿಯಿಂದ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ದೂರು ಸಲ್ಲಿಕೆಯಾಗಿದ್ದು, ಆರೋಪಿ ನಂಜೇಗೌಡನ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ಕಾನೂನು ಪ್ರಕ್ರಿಯೆ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ. ದೂರಿನೊಂದಿಗೆ ಸದರಿ ಆಕ್ಷೇಪಾರ್ಹ ಪೋಸ್ಟ್‌ಗಳ ಪ್ರತಿಗಳನ್ನು ಲಗತ್ತಿಸಲಾಗಿದೆ.
ಈ ಪತ್ರಕ್ಕೆ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾದ ಶರತ್ ಎಸ್.ವಿ. ಕಲ್ಯಾಣಿ ಹಾಗೂ ಸಹ-ಸಂಚಾಲಕರಾದ ದಿನೇಶ್ ಆಚಾರ್ಯ ಅವರು ದೂರು ದಾಖಲಿಸುವಾಗ ಹಾಜರಿದ್ದರು.
Post in social media agains PM Modi, complaint lodge bY BJP


