SUDDILIVE || SHIVAMOGGA
ಶಿವಮೊಗ್ಗ ಮನಸಾ ಆಸ್ಪತ್ರೆಯಿಂದ ನಾಪತ್ತೆಯಾದ ಮಾನಸಿಕ ಅಸ್ವಸ್ಥ ಮಹಿಳೆ: ತಂದೆಯಿಂದ ಪೊಲೀಸ್ ದೂರು-Mentally ill woman goes missing from Shivamogga Manasa Hospital: Police complaint filed by father
ಹಲವು ದಿನಗಳಿಂದ ಬಂದ್ ಆಗಿದ್ದ ಮಾನಸಿಕ ಆಸ್ಪತ್ರೆಯಿಂದ ನಾಪತ್ತೆ ಪ್ರಕರಣಗಳು ಮತ್ತೆ ಮರುಕಳಿಸಲು ಆರಂಭವಾಗಿದೆ. ಚಿಕಿತ್ಸೆಗಾಗಿ ಮನಸಾ ಆಸ್ಪತ್ರೆಗೆ ಕರೆತಂದಿದ್ದ 29 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆ ಆವರಣದಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ತಂದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಮಡಗು ಗ್ರಾಮದ ನಿವಾಸಿ ಮಂಜುಳಾ (29) ಅವರು ಕಳೆದ ಐದು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಶಿವಮೊಗ್ಗದ ಮನಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಕರೆತಂದು ಔಷಧೋಪಚಾರ ಮಾಡಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂನ್ 12 ರಂದು ತಂದೆ ವೀರನಗಪ್ಪ ಅವರು ಮಗಳನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮನಸಾ ಆಸ್ಪತ್ರೆಗೆ ಕರೆತಂದಿದ್ದರು. ಚಿಕಿತ್ಸೆ ಬಳಿಕ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆಸ್ಪತ್ರೆ ಸಮೀಪ ಮಗಳನ್ನು ಬಿಟ್ಟು ತಾವು ಊಟಕ್ಕೆ ತೆರಳಿದ್ದರು. ಸುಮಾರು 2.15ಕ್ಕೆ ಮರಳಿ ಬಂದಾಗ ಮಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಆಸ್ಪತ್ರೆ ಸುತ್ತಮುತ್ತ ಹಾಗೂ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾಪತ್ತೆಯಾದ ಮಂಜುಳಾ ಅವರು ಸುಮಾರು 5 ಅಡಿ ಎತ್ತರ ಹೊಂದಿದ್ದು, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದಾರೆ. ನಾಪತ್ತೆಯಾಗುವ ವೇಳೆ ಕಪ್ಪು ಬಣ್ಣದ ಸೀರೆ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
