SUDDILIVE || BHADRAVATHI
ಮನೆಯೊಳಗೆ ವಿಷಕಾರಿ ಹಾವು ಬಿಟ್ಟು ಯುವತಿಯನ್ನು ಕೊಲ್ಲಲು ಸಂಚು? ಇಬ್ಬರು ಅಪರಿಚಿತರ ವಿರುದ್ಧ ಎಫ್ಐಆರ್-Conspiracy to kill a young woman by leaving a poisonous snake inside the house? FIR against two strangers
ಮನೆಯಲ್ಲಿ ಒಂಟಿಯಾಗಿದ್ದ ಯುವತಿಯೊಬ್ಬಳನ್ನು ಗುರಿಯಾಗಿಸಿಕೊಂಡು ಇಬ್ಬರು ಅಪರಿಚಿತರು ವಿಷಕಾರಿ ಹಾವನ್ನು ಮನೆಯ ಆವರಣದೊಳಗೆ ಬಿಟ್ಟು ಪರಾರಿಯಾಗಿರುವ ವಿಚಿತ್ರ ಹಾಗೂ ಆತಂಕಕಾರಿ ಘಟನೆ ಭದ್ರಾವತಿಯ ಜನ್ನಾಪುರದಲ್ಲಿ ನಡೆದಿದೆ.
ಜನ್ನಾಪುರದ ಪಿತರಿ ನಂಜಪ್ಪ ರಸ್ತೆಯ ನಿವಾಸಿ 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜೂನ್ 12ರಂದು ಬೆಳಗ್ಗೆ ಸುಮಾರು 10.55ರ ವೇಳೆಗೆ ಯುವತಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಮನೆಯ ಕಾಂಪೌಂಡ್ ಗೇಟ್ ತೆರೆಯುವ ಶಬ್ದ ಕೇಳಿಬಂದಿದೆ. ಹೊರಗೆ ಬಂದು ನೋಡಿದಾಗ ಸುಮಾರು 20 ರಿಂದ 25 ವರ್ಷದೊಳಗಿನ ಇಬ್ಬರು ಯುವಕರು ಗೇಟ್ ಒಳಗೆ ಪ್ರವೇಶಿಸಿ, ತಮ್ಮೊಂದಿಗೆ ತಂದಿದ್ದ ಚೀಲದಿಂದ ದೊಡ್ಡ ವಿಷಕಾರಿ ಹಾವೊಂದನ್ನು ಮನೆಯ ಆವರಣದೊಳಗೆ ಬಿಟ್ಟು ಓಡಿಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕಂಡು ಭಯಗೊಂಡ ಯುವತಿ ತಕ್ಷಣ ಕೂಗಿಕೊಂಡಿದ್ದು, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಕೆಲಸಕ್ಕೆ ತೆರಳಿದ್ದ ತಾಯಿ ಸಂಜೆ ಮನೆಗೆ ಬಂದ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಬಗ್ಗೆ ಖಚಿತಪಡಿಸಿಕೊಂಡು ಪೊಲೀಸರಿಗೆ ದೂರು ನೀಡಲಾಗಿದೆ.
ತನ್ನನ್ನು ಕೊಲ್ಲುವ ಉದ್ದೇಶದಿಂದಲೇ ಮನೆಯೊಳಗೆ ವಿಷಕಾರಿ ಹಾವನ್ನು ಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಗುಣಶ್ರೀ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಅಪರಿಚಿತರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
