SUDDILIVE || SHIVAMOGGA
ಶರಾವತಿ ವಿದ್ಯುದಾಗಾರದಲ್ಲಿ ಪೈಪ್ ಲೀಕೇಜ್; ನೀರು ನುಗ್ಗಿ ಕೆಲಕಾಲ ವಿದ್ಯುತ್ ಉತ್ಪಾದನೆ ಸ್ಥಗಿತ-Pipe leakage at Sharavati power plant; water intrusion, power generation halted for some time
ಸಾಗರ: ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯ ಶರಾವತಿ ವಿದ್ಯುದಾಗಾರದಲ್ಲಿ ಪೈಪ್ ಲೀಕೇಜ್‌ನಿಂದ ಏಕಾಏಕಿ ನೀರು ಟರ್ಬೈನ್ ವಿಭಾಗಕ್ಕೆ ನುಗ್ಗಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಗುರುವಾರ ನಡೆದಿದೆ.
ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಶರಾವತಿ ವಿದ್ಯುದಾಗಾರದಲ್ಲಿ 7ನೇ ಯೂನಿಟ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪೈಪ್‌ನಲ್ಲಿದ್ದ ನೀರನ್ನು ಮೊದಲೇ ಖಾಲಿ ಮಾಡಲಾಗಿದ್ದರೂ, ಡ್ರೈನ್ ಪೈಪ್‌ನಲ್ಲಿ ಉಂಟಾದ ಸೋರಿಕೆಯಿಂದ ಮತ್ತೆ ನೀರು ತುಂಬಿ ಏಕಾಏಕಿ ಟರ್ಬೈನ್ ಭಾಗಕ್ಕೆ ನುಗ್ಗಿದೆ. ಪರಿಣಾಮ ಟರ್ಬೈನ್ ಸುತ್ತಮುತ್ತ ಸುಮಾರು ಒಂದೂವರೆ ಅಡಿಯಷ್ಟು ನೀರು ನಿಂತಿತ್ತು.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಲನೆಯಲ್ಲಿದ್ದ ಎಲ್ಲಾ ವಿದ್ಯುತ್ ಉತ್ಪಾದನಾ ಯೂನಿಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಬಳಿಕ ನೀರನ್ನು ಹೊರಹಾಕಿ, ಎಲ್ಲಾ ಘಟಕಗಳ ತಾಂತ್ರಿಕ ಪರಿಶೀಲನೆ ನಡೆಸಿದ ನಂತರ ಸಂಜೆ ವೇಳೆಗೆ ಮತ್ತೆ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಲಾಯಿತು.
ಶರಾವತಿ ವಿದ್ಯುದಾಗಾರದಲ್ಲಿ ಒಟ್ಟು 10 ಯೂನಿಟ್‌ಗಳಿದ್ದು, ಪ್ರತಿಯೊಂದೂ 103.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಿರುವ ಹಿನ್ನೆಲೆಯಲ್ಲಿ ಕೇವಲ ಮೂರು ಯೂನಿಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಅವಘಡ ಸಂಭವಿಸಿದ 7ನೇ ಯೂನಿಟ್ ನಿರ್ವಹಣೆಗೆ ಒಳಪಡಿಸಲಾಗಿತ್ತು.
1964ರಿಂದ ಕಾರ್ಯನಿರ್ವಹಿಸುತ್ತಿರುವ ಶರಾವತಿ ವಿದ್ಯುದಾಗಾರದಲ್ಲಿ ಅವಘಡಕ್ಕೊಳಗಾದ 7ನೇ ಯೂನಿಟ್ 1968ರಿಂದ ಸೇವೆಯಲ್ಲಿದೆ.
Pipe leakage at Sharavati power plant; water intrusion, power generation halted for some time
