ಶಿರಾಳಕೊಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ-Shiralakoppa police conduct massive operation: Gold ornaments worth over ₹10 lakh seized in two separate cases

 SUDDILIVE || SHIRALKOPPA

ಶಿರಾಳಕೊಪ್ಪ ಪೊಲೀಸರ ಭರ್ಜರಿ ಕಾರ್ಯಾಚರಣೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ-Shiralakoppa police conduct massive operation: Gold ornaments worth over ₹10 lakh seized in two separate cases     

Gold, ornaments

ಶಿವಮೊಗ್ಗ, ಜೂ.8: ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಚಿನ್ನಾಭರಣ ಕಳವು ಮತ್ತು ಸರ ಕಸಿಯುವ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಒಟ್ಟು ₹10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ, ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದ ದಂಪತಿ ತಮ್ಮ ಮಕ್ಕಳೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೋಗರ್ಸಿ ಗ್ರಾಮದ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಕೊರಳಿನಲ್ಲಿದ್ದ ಸುಮಾರು 15 ಗ್ರಾಂ ತೂಕದ ಬಂಗಾರದ ತಾಳಿಸರವನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಮಹೇಶ ಸಂಗೊಳ್ಳಿ (32) ಹಾಗೂ ಚಿದಾನಂದ ಬೇವಿನಕೊಪ್ಪ (22) ಅವರನ್ನು ಬಂಧಿಸಿ, ಅವರಿಂದ ₹2 ಲಕ್ಷ ಮೌಲ್ಯದ 15 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ಒಟ್ಟು ₹4 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಮಹಿಳೆಯೊಬ್ಬರು ಶಿರಾಳಕೊಪ್ಪದಿಂದ ಹಿರೇಕೆರೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಬಂಗಾರದ ಆಭರಣಗಳು ಕಳುವಾಗಿರುವುದನ್ನು ಗಮನಿಸಿ ದೂರು ನೀಡಿದ್ದರು.

ಈ ಪ್ರಕರಣದ ತನಿಖೆಯಲ್ಲಿ ಆರೋಪಿಗಳಾದ ವೆಂಕಟೇಶ ಅಲಿಯಾಸ್ ಭಟ್ಟರ ವೆಂಕಟೇಶ (35) ಹಾಗೂ ಮಂಜುಳಾ ಸಿ. (42) ಅವರನ್ನು ಬಂಧಿಸಿರುವ ಪೊಲೀಸರು, ಅವರಿಂದ 62 ಗ್ರಾಂ ತೂಕದ ₹6.20 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಜಿ. ಕಾರಿಯಪ್ಪ, ಡಿವೈಎಸ್ಪಿ ಕೇಶವ ಕೆ.ಇ. ಹಾಗೂ ಸಿಪಿಐ ಸಂತೋಷ್ ಎಂ. ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ, ಶಿರಾಳಕೊಪ್ಪ ಠಾಣೆಯ ಪಿಎಸ್‌ಐ ಪ್ರಶಾಂತ ಕುಮಾರ ಟಿ.ಬಿ. ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Shiralakoppa police conduct massive operation: Gold ornaments worth over ₹10 lakh seized in two separate cases

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close