ಶಿವಮೊಗ್ಗ ಏರ್‌ಪೋರ್ಟ್ ಖಾಲಿ ಖಾಲಿ: ಇಂಡಿಗೋ ಬಳಿಕ ಸ್ಪೈಸ್‌ಜೆಟ್‌ ಸ್ಂಸ್ಥೆಯೂ ಗುಡ್‌ಬೈ?-Shivamogga Airport is empty: After IndiGo, is SpiceJet also saying goodbye?

SUDDILIVE || SHIVAMOGGA

ಶಿವಮೊಗ್ಗ ಏರ್‌ಪೋರ್ಟ್ ಖಾಲಿ ಖಾಲಿ: ಇಂಡಿಗೋ ಬಳಿಕ ಸ್ಪೈಸ್‌ಜೆಟ್‌ ಸ್ಂಸ್ಥೆಯೂ ಗುಡ್‌ಬೈ?-Shivamogga Airport is empty: After IndiGo, is SpiceJet also saying goodbye?  

Shivamogga, Airport

ಶಿವಮೊಗ್ಗ, ಜೂನ್ 5: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣ ಇದೀಗ ಬಹುತೇಕ ಖಾಲಿ ಖಾಲಿಯಾಗಿ ಕಾಣಿಸುತ್ತಿದ್ದು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುತ್ತಿದ್ದ ವಿಮಾನ ಸೇವೆಗಳ ಸ್ಥಗಿತದಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ಜೂನ್ 1ರಿಂದ ಇಂಡಿಗೋ ಸಂಸ್ಥೆ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿರುವುದು ಈಗಾಗಲೇ ತಿಳಿದ ಸಂಗತಿಯಾಗಿದೆ. ಸಿಬ್ಬಂದಿ ಹಾಗೂ ಪೈಲಟ್‌ಗಳ ಕೊರತೆಯಿಂದಾಗಿ ಶಿವಮೊಗ್ಗ ಮಾರ್ಗದ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂಬ ಮಾಹಿತಿ ಎರಡು ತಿಂಗಳ ಹಿಂದೆಯೇ ಹರಿದಾಡಿತ್ತು.

ಇದೀಗ ಸ್ಪೈಸ್‌ಜೆಟ್ ಕೂಡ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಮಾಹಿತಿ ಕೇಳಿಬಂದಿದ್ದು, ವಿಮಾನ ನಿಲ್ದಾಣದಲ್ಲಿದ್ದ ಸಂಸ್ಥೆಯ ಕಚೇರಿಯನ್ನೂ ಮುಚ್ಚಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಸ್ಪೈಸ್‌ಜೆಟ್ ಅಥವಾ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ.

ವಿಮಾನ ನಿಲ್ದಾಣದ ನಿರ್ದೇಶಕರನ್ನು ಸಂಪರ್ಕಿಸಿದಾಗ, "ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಯಾವುದೇ ವಿಮಾನ ಸಂಸ್ಥೆಗೆ ನಿರ್ದಿಷ್ಟ ಮಾರ್ಗ ಲಾಭದಾಯಕವಾಗದಿದ್ದರೆ, ಆ ಮಾರ್ಗದ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇರುತ್ತದೆ" ಎಂದು ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.

ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಎರಡೂ ಸಂಸ್ಥೆಗಳು ಹಾರಾಟ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಗಣನೀಯವಾಗಿ ಕುಸಿದಿದ್ದು, ನಿಲ್ದಾಣ ಬಹುತೇಕ ನಿರ್ಜನ ವಾತಾವರಣದಲ್ಲಿದೆ.

ಒಂದೆಡೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸುವ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಪ್ರಮುಖ ವಿಮಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುಮಾರು ₹600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮಹತ್ವಾಕಾಂಕ್ಷಿ ಯೋಜನೆಯ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವುದು, ಹೊಸ ಮಾರ್ಗಗಳನ್ನು ಪರಿಚಯಿಸುವುದು ಹಾಗೂ ವಿಮಾನ ಸಂಸ್ಥೆಗಳನ್ನು ಆಕರ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಶಿವಮೊಗ್ಗ ವಿಮಾನ ನಿಲ್ದಾಣವು "ಹೆಸರಿಗಷ್ಟೇ ಏರ್‌ಪೋರ್ಟ್" ಎಂಬ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಜೂ.1 ರಿಂದ ಜೂ.8 ರ ವರೆಗೆ ಸ್ಪೈಸ್ ಜೆಟ್ ಹಾರಾಟ ಸ್ಥಗಿತಗೊಂಡಿದೆ ಎಂಬ ಮಾಹಿತಿ ಬೆನ್ನಲ್ಲೇ ಸ್ಪೈಸ್ ಜೆಟ್ ತನ್ನ ಕಚೇರಿಯನ್ನೇ ಬಂದ್ ಮಾಡಿಕೊಂಡು ಹೋಗಿರುವುದು ಈ ಎಲ್ಲಾ‌ ಅನುಮಾನಗಳಿಗೆ ಕಾರಣವಾಗಿದೆ. 

ವಿಮಾನ ಹಾರಾಟಗಳ ಸ್ಥಗಿತದಿಂದ ಶಿವಮೊಗ್ಗದ ವಾಣಿಜ್ಯ, ಉದ್ಯಮ, ಪ್ರವಾಸೋದ್ಯಮ ಹಾಗೂ ತುರ್ತು ಪ್ರಯಾಣದ ಅಗತ್ಯಗಳಿಗೆ ಹೊಡೆತ ಬೀಳುವ ಆತಂಕವೂ ವ್ಯಕ್ತವಾಗಿದೆ.

Shivamogga Airport is empty: After IndiGo, is SpiceJet also saying goodbye?  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close