SUDDILIVE || SHIVAMOGGA
ಇನ್‌ಸ್ಟಾಗ್ರಾಂನಲ್ಲಿ ಸೋಪ್ ಆರ್ಡರ್ ಮಾಡಿದ ಎಲೆಕ್ಟ್ರಿಶಿಯನ್‌ಗೆ ₹2.97 ಲಕ್ಷ ವಂಚನೆ-Electrician duped of ₹2.97 lakh for ordering soap on Instagram
ಶಿವಮೊಗ್ಗ: ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿ ಆನ್‌ಲೈನ್‌ನಲ್ಲಿ ಸೋಪ್ ಆರ್ಡರ್ ಮಾಡಿದ್ದ ಎಲೆಕ್ಟ್ರಿಶಿಯನ್ ಒಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹2.97 ಲಕ್ಷ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಗಾಂಧಿಬಜಾರ್ ನಿವಾಸಿಯಾಗಿರುವ 38 ವರ್ಷದ ಎಲೆಕ್ಟ್ರಿಶಿಯನ್ ಈ ವಂಚನೆಗೆ ಒಳಗಾದವರಾಗಿದ್ದಾರೆ. ಜುಲೈ 7ರಂದು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ "ಘರ್ ಸೋಪ್" ಕುರಿತ ಜಾಹೀರಾತು ಗಮನಕ್ಕೆ ಬಂದಿದ್ದು, ಅದನ್ನು ನಂಬಿ ಆನ್‌ಲೈನ್ ಮೂಲಕ ಸೋಪ್‌ಗೆ ಆರ್ಡರ್ ಮಾಡಿದ್ದರು.
ಕೆಲ ದಿನಗಳಾದರೂ ಆರ್ಡರ್ ಮಾಡಿದ ಸೋಪ್ ಮನೆಗೆ ತಲುಪದ ಹಿನ್ನೆಲೆಯಲ್ಲಿ, ಗೂಗಲ್‌ನಲ್ಲಿ ಹುಡುಕಿ ಸಿಕ್ಕಿದ್ದ ಕೋರಿಯರ್ ಸೇವೆಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೋರಿಯರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಪಾರ್ಸೆಲ್ ಟ್ರ್ಯಾಕ್ ಮಾಡಲು ಒಂದು ಲಿಂಕ್ ಕಳುಹಿಸಿರುವುದಾಗಿ ಹೇಳಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ.
ಅದರಂತೆ ಎಲೆಕ್ಟ್ರಿಶಿಯನ್ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಅವರ ಮೊಬೈಲ್‌ಗೆ ಹಲವು ಸಂದೇಶಗಳು ಬರಲಾರಂಭಿಸಿವೆ. ಅನುಮಾನಗೊಂಡ ಅವರು ಲಿಂಕ್ ಅನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಸೈಬರ್ ವಂಚಕರು ತಮ್ಮ ಕೃತ್ಯವನ್ನು ಎಸಗಿದ್ದರು.
ಬಳಿಕ ಮಗನ ಶಾಲಾ ಶುಲ್ಕ ಪಾವತಿಸಲು ತೆರಳಿದ ವೇಳೆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಅವರ ಖಾತೆಯಿಂದ ಎರಡು ಬಾರಿ ತಲಾ ₹1 ಲಕ್ಷ ಹಾಗೂ ಮತ್ತೊಮ್ಮೆ ₹97 ಸಾವಿರ, ಒಟ್ಟು ₹2.97 ಲಕ್ಷ ಹಣ ಆನ್‌ಲೈನ್ ಮೂಲಕ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆಯ ಸಂಬಂಧ ಸಂತ್ರಸ್ತರು ಶಿವಮೊಗ್ಗ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಸೈಬರ್ ಪೊಲೀಸರ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಜಾಹೀರಾತುಗಳು ಹಾಗೂ ಗೂಗಲ್‌ನಲ್ಲಿ ದೊರೆಯುವ ಅಪರಿಚಿತ ಸಹಾಯವಾಣಿ ಸಂಖ್ಯೆಗಳನ್ನು ನಂಬಬಾರದು. ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಹಾಗೂ ಯಾವುದೇ ಓಟಿಪಿ, ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸೈಬರ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
