ಅಸಲಿ ಚಿನ್ನ ಎಂದು ನಂಬಿಸಿ 10 ಲಕ್ಷ ರೂ. ವಂಚನೆ- Fraud of Rs 10 lakhs by making it look like genuine gold

SUDDILIVE || SHIVAMOGGA

ಅಸಲಿ ಚಿನ್ನ ಎಂದು ನಂಬಿಸಿ 10 ಲಕ್ಷ ರೂ. ವಂಚನೆ- Fraud of Rs 10 lakhs by making it look like genuine gold 

Fraud, lakhs


ಶಿವಮೊಗ್ಗ: ಅಸಲಿ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ, ಟ್ರಾವೆಲ್ಸ್ ಮ್ಯಾನೇಜರ್ ಒಬ್ಬರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ವಂಚಿಸಿ ನಕಲಿ ಚಿನ್ನದ ಒಡವೆಗಳನ್ನು ನೀಡಿರುವ ಆಘಾತಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗಣೇಶ್ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ:

ಶಿವಮೊಗ್ಗ ನಗರದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿಯಾದ ನವೀನ್ ಟಿ.ಪಿ (40) ಎಂಬುವರು ಎನ್.ಟಿ ರಸ್ತೆಯಲ್ಲಿರುವ ಪ್ರತಿಷ್ಠಿತ ಟ್ರಾವೆಲ್ಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇ 10 ರಿಂದ ಮೇ 20ರ ಅವಧಿಯಲ್ಲಿ ಇವರಿಗೆ ಕರೆ ಮಾಡಿದ ಗಣೇಶ್ ಎಂಬಾತ, ತಾನು ಹಿಂದೆ ಅದೇ ಟ್ರಾವೆಲ್ಸ್‌ನ ವೋಲ್ವೋ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದ್ದಾಗಿ ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ತನಗೆ ವಿಜಯವಾಡದಲ್ಲಿ ಟೆಲಿಫೋನ್ ಕೇಬಲ್ ಅಗೆಯುವಾಗ ನಿಧಿಯ ರೂಪದಲ್ಲಿ 3 ಕೆಜಿ ಚಿನ್ನದ ಸರಗಳಿದ್ದ ಮಡಿಕೆಯೊಂದು ಸಿಕ್ಕಿದೆ ಎಂದು ನಂಬಿಸಿದ್ದಾನೆ. ತನಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಮಿಷ ಒಡ್ಡಿದ್ದಾನೆ.

ಸ್ಯಾಂಪಲ್‌ನಲ್ಲಿ ಅಸಲಿ, ಅಂತಿಮವಾಗಿ ನಕಲಿ!

ಇದನ್ನು ನಂಬಿದ ನವೀನ್, ಮೊದಲು ಚಿನ್ನವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮೇ 20 ರಂದು ಶಿವಮೊಗ್ಗದ ಹಳೇ ಮಂಡ್ಲಿಯ ಖಾಲಿ ಜಾಗದಲ್ಲಿ ನವೀನ್ ಮತ್ತು ಅವರ ಸ್ನೇಹಿತರು ಗಣೇಶನನ್ನು ಭೇಟಿಯಾದಾಗ, ಆತ 2 ಗ್ರಾಂ ಚಿನ್ನದ ಮಣಿಗಳನ್ನು ಸ್ಯಾಂಪಲ್ ಆಗಿ ನೀಡಿದ್ದನು. ಅದನ್ನು ಪರೀಕ್ಷಿಸಿದಾಗ 92% ಅಸಲಿ ಎಂಬುದು ದೃಢಪಟ್ಟಿತ್ತು. ನಂತರ ನವೀನ್ ತಮ್ಮ ಬಳಿ 10 ಲಕ್ಷ ರೂ. ಮಾತ್ರ ಇರುವುದಾಗಿ ತಿಳಿಸಿದಾಗ, ಆರೋಪಿಯು 1.5 ಕೆಜಿ ಚಿನ್ನದ ಒಡವೆ ನೀಡುವುದಾಗಿ ಒಪ್ಪಿಕೊಂಡಿದ್ದಾನೆ. ನವೀನ್ ತಮ್ಮ ಬಳಿಯಿದ್ದ ಒಡವೆಗಳನ್ನು ಅಡವಿಟ್ಟು 10 ಲಕ್ಷ ರೂ. ಹಣ ಹೊಂದಿಸಿಕೊಂಡಿದ್ದಾರೆ.

ಮೇ 24 ರಂದು ಸಂಜೆ ಹಳೇ ಮಂಡ್ಲಿಯ ಅದೇ ಖಾಲಿ ಜಾಗಕ್ಕೆ ಹಣದೊಂದಿಗೆ ಹೋದ ನವೀನ್ ಹಾಗೂ ಅವರ ಸ್ನೇಹಿತರಿಗೆ, ಆರೋಪಿ ಗಣೇಶ್ ಮತ್ತು ಆತನ ಇಬ್ಬರು ಸಹಚರರು ನೀಲಿ ಬಣ್ಣದ ಚೀಲದಲ್ಲಿದ್ದ 1.5 ಕೆಜಿ ತೂಕದ ಚಿನ್ನದ ಬಣ್ಣದ ಒಡವೆಗಳನ್ನು ನೀಡಿ 10 ಲಕ್ಷ ರೂ. ಹಣ ಪಡೆದು ಅಲ್ಲಿಂದ ತರಾತುರಿಯಲ್ಲಿ ಪರಾರಿಯಾಗಿದ್ದಾರೆ.

ಪೊಲೀಸ್ ದೂರು ದಾಖಲು:

ನಂತರ ಆ ಒಡವೆಗಳನ್ನು ನವೀನ್ ಪರೀಕ್ಷಿಸಿದಾಗ ಅವು ನಕಲಿ ಬಂಗಾರ ಎಂಬುದು ತಿಳಿದುಬಂದಿದೆ. ತಕ್ಷಣ ಆರೋಪಿಯ ಮೊಬೈಲ್ ಸಂಖ್ಯೆಗಳಾದ 9160959788 ಹಾಗೂ 9963598817 ಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆರೋಪಿಯು ಮತ್ತೆ ಸಂಪರ್ಕಕ್ಕೆ ಸಿಗಬಹುದು ಎಂದು ಕಾದ ನವೀನ್, ಆತ ಸಿಗದಿದ್ದಾಗ ಜೂನ್ 30 ರಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ದೊಡ್ಡಪೇಟೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 318(4) ಮತ್ತು 3(5) ರ ಅಡಿಯಲ್ಲಿ ಅಪರಾಧ ಸಂಖ್ಯೆ 0235/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

Fraud of Rs 10 lakhs by making it look like genuine gold 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close