SUDDILIVE || SHIVAMOGGA
ಪೊಲೀಸ್ ಠಾಣೆಗೆ ನ್ಯಾಯಾಧೀಶರ ಭೇಟಿ, ಇ-ಚಲಾನ್ ಪರಿಶೀಲನೆ- Judge visits police station, checks e-challans
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್. ಅವರು ಮಂಗಳವಾರ ಸಂಜೆ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ, ಇ-ಚಲಾನ್ ಪ್ರಕರಣಗಳಲ್ಲಿ ಬಾಕಿ ಇರುವ ದಂಡದ ಮೊತ್ತದ ಸಂಗ್ರಹ ಪ್ರಗತಿಯನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಲಭ್ಯವಾದ ಮಾಹಿತಿಯಂತೆ, ಜೂನ್ 21, 2026ರಿಂದ ಜುಲೈ 1, 2026ರವರೆಗೆ ಶಿವಮೊಗ್ಗದಲ್ಲಿ ಒಟ್ಟು 10,778 ಇ-ಚಲಾನ್ ಪ್ರಕರಣಗಳಲ್ಲಿ ವಾಹನ ಸವಾರರು ರೂ.46,06,500 ದಂಡವನ್ನು ಶೇಕಡ 50ರಷ್ಟು ರಿಯಾಯಿತಿಯೊಂದಿಗೆ ಪಾವತಿಸಿದ್ದು, ಕರ್ನಾಟಕ ಸರ್ಕಾರದ ವಿಶೇಷ ಆದೇಶದ ಪ್ರಯೋಜನವನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರ ಕಾರ್ಯವನ್ನು ನ್ಯಾಯಾಧೀಶರು ಶ್ಲಾಘಿಸಿದರು.
ಸರ್ಕಾರದ ಆದೇಶ ಹೊರಬಂದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಒಟ್ಟು 2,99,037 ಇ-ಚಲಾನ್ ಪ್ರಕರಣಗಳು ದಾಖಲಾಗಿದ್ದು, ರೂ.23,71,18,350 ದಂಡದ ಮೊತ್ತ ಬಾಕಿ ಉಳಿದಿತ್ತು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ಮೇಲಿರುವ ಇ-ಚಲಾನ್ ಪ್ರಕರಣಗಳ ಮಾಹಿತಿಯನ್ನು ಪೂರ್ವ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಥವಾ ನಗರದ ವಿವಿಧ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರನ್ನು ಸಂಪರ್ಕಿಸಿ ವಾಹನ ಸಂಖ್ಯೆಯ ಮೂಲಕ ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಅಲ್ಲದೆ, ಜುಲೈ 10, 2026ರೊಳಗೆ ಬಾಕಿ ಇರುವ ದಂಡವನ್ನು ಶೇಕಡ 50ರಷ್ಟು ರಿಯಾಯಿತಿಯೊಂದಿಗೆ ಪಾವತಿಸಿ ಸರ್ಕಾರದ ಸೌಲಭ್ಯದ ಪ್ರಯೋಜನ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಇ-ಚಲಾನ್ ವಿವರಗಳನ್ನು https://103.195.218.159/challan ಜಾಲತಾಣದಲ್ಲಿಯೂ ಪರಿಶೀಲಿಸಬಹುದಾಗಿದೆ.

ಕಾಮೆಂಟ್ ಪೋಸ್ಟ್ ಮಾಡಿ