SUDDILIVE || SHIVAMOGGA
ಶಿವಮೊಗ್ಗ-ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 3.5 ತಿಂಗಳ ಹೆಣ್ಣು ಮಗು ಸಾವು-Shivamogga- A 3.5-month-old baby girl suffering from respiratory problems died
ಶಿವಮೊಗ್ಗ: ಉಸಿರಾಟದ ತೊಂದರೆ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಮೂರುವರೆ ತಿಂಗಳ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲ್ಬುರ್ಗಿ ತಾಲೂಕಿನ ನಿವಾಸಿಗಳಾದ ಪವಿತ್ರ ಮತ್ತು ಹನುಮೇಶ್ ದಂಪತಿಗಳ ಮೂರುವರೆ ತಿಂಗಳ ಹೆಣ್ಣು ಮಗು ಅನ್ವಿಕ ಕಳೆದ ಎಂಟು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿತ್ತು. ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದ ಹಿನ್ನೆಲೆಯಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಮಗುವಿನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿನ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರು ಕುಟುಂಬಕ್ಕೆ ಸಲಹೆ ನೀಡಿದ್ದರು. ಅದರಂತೆ ಆಂಬುಲೆನ್ಸ್ ಮೂಲಕ ಮಗುವನ್ನು ಮಣಿಪಾಲಿಗೆ ಕರೆದೊಯ್ಯಲಾಗುತ್ತಿತ್ತು.
ಈ ವೇಳೆ ಮಾರ್ಗಮಧ್ಯೆ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ತುರ್ತು ಚಿಕಿತ್ಸೆಯ ಅಗತ್ಯ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ವೈದ್ಯರು ಮಗುವಿನ ಜೀವ ಉಳಿಸಲು ಶಕ್ತಿಮೀರಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಮಗುವಿನ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆಗೆ ಆಗಮಿಸಿದ್ದ ಸಂಬಂಧಿಕರ ದುಃಖದ ವಾತಾವರಣ ಮನಕಲಕುವಂತಿತ್ತು.
ಮೂರುವರೆ ತಿಂಗಳ ಕಂದಮ್ಮ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕುಟುಂಬದವರನ್ನು ತೀವ್ರ ಶೋಕದಲ್ಲಿ ಮುಳುಗಿಸಿದ್ದು, ಈ ಘಟನೆ ಎಲ್ಲರ ಮನಸ್ಸನ್ನೂ ಮರುಗಿಸಿದೆ.
Shivamogga- A 3.5-month-old baby girl suffering from respiratory problems died

