SUDDILIVE || SHIVAMOGGA
ಶಿವಮೊಗ್ಗ-ತುಂಗಾ ನದಿಗೆ ಮಹಿಳೆ ಹಾರಿರುವ ಶಂಕೆ-Woman suspected of jumping into Shimoga-Tunga river
ಶಿವಮೊಗ್ಗ, ಜು. 30: ಶಿವಮೊಗ್ಗ ನಗರದ ತುಂಗಾ ಹಳೆಯ ಸೇತುವೆ ಮೇಲಿನಿಂದ ಮಹಿಳೆಯೊಬ್ಬರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಗರದ ಸಮೀಪದ ತುಂಗಾ ಹಳೆಯ ಸೇತುವೆ ಬಳಿ ಈ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ಮಹಿಳೆಯ ಮೊಬೈಲ್ ಫೋನ್ ಹಾಗೂ ವೇಲ್ (ದುಪ್ಪಟ್ಟೆ) ಪತ್ತೆಯಾಗಿದ್ದು, ಇದರಿಂದ ಮಹಿಳೆ ನದಿಗೆ ಹಾರಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಯೂ ಕೂಡ ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದು, ಬೋಟ್‌ಗಳನ್ನು ಬಳಸಿಕೊಂಡು ತುಂಗಾ ನದಿಯಲ್ಲಿ ಮಹಿಳೆಗಾಗಿ ನಿರಂತರ ಶೋಧ ನಡೆಸುತ್ತಿದ್ದಾರೆ.
ನದಿಯ ವಿವಿಧ ಭಾಗಗಳಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಸುದ್ದಿ ಬರೆಯುವ ವೇಳೆಯವರೆಗೆ ಮಹಿಳೆ ಪತ್ತೆಯಾಗಿಲ್ಲ. ಜೊತೆಗೆ ನದಿಗೆ ಹಾರಿರುವ ಮಹಿಳೆಯ ಗುರುತೂ ಇನ್ನೂ ತಿಳಿದು ಬಂದಿಲ್ಲ.
ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಾಗಿದ್ದು, ಮಹಿಳೆಯ ಗುರುತು ಹಾಗೂ ಘಟನೆಗೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಕಾಣೆಯಾಗಿರುವ ಮಹಿಳೆ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೇ ಕೋಟೆ ಪೊಲೀಸ್ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇತ್ತ ಮಹಿಳೆ ನದಿಗೆ ಬಿದ್ದ ಸುದ್ದಿ ತಿಳಿದು ಸೇತುವೆ ಮೇಲೆ ಜಮಾವಣೆಯಾಗಿ ಟ್ರಾಫಿಕ್ ಜ್ಯಾಮ್ ಸಹ ಆಗಿರುವುದು ತಿಳಿದು ಬಂದಿದೆ.


