ಮತದಾರ ವಿಶೇಷ ಪರಿಷ್ಕರಣೆ-ಗ್ರಾಮಾಂತರ ಭಾಗದಲ್ಲಿ ಶೇ.98.53ರಷ್ಟು ಪ್ರಗತಿ - Submit census forms by August 8; allow names to continue on voter list: Election Officer Manjunath

SUDDILIVE || SHIVAMOGGA

ಮತದಾರ ವಿಶೇಷ ಪರಿಷ್ಕರಣೆ-ಗ್ರಾಮಾಂತರ ಭಾಗದಲ್ಲಿ ಶೇ.98.53ರಷ್ಟು ಪ್ರಗತಿ - Submit census forms by August 8; allow names to continue on voter list: Election Officer Manjunath  

Submit, forums

ಶಿವಮೊಗ್ಗ, ಜು.30: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯಕ್ರಮ ಅಂತಿಮ ಹಂತದಲ್ಲಿದ್ದು, ಇನ್ನೂ ಗಣತಿ ನಮೂನೆ ಸಲ್ಲಿಸದ ಮತದಾರರು ಆಗಸ್ಟ್ 8ರ ಸಂಜೆ 5 ಗಂಟೆಯೊಳಗೆ ಕಡ್ಡಾಯವಾಗಿ ತಮ್ಮ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಿಗೆ ನಮೂನೆಗಳನ್ನು ಹಿಂತಿರುಗಿಸುವಂತೆ ಸೂಡಾ ಆಯುಕ್ತ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿವೆ. 2,20,250 ಗಣತಿ ನಮೂನೆಗಳನ್ನು ಮುದ್ರಿಸಿ ಎಲ್ಲಾ ಮತದಾರರಿಗೆ ವಿತರಣೆ ಮಾಡಲಾಗಿದೆ. ಇದರಲ್ಲಿ 2,17,015 ನಮೂನೆಗಳು ಈಗಾಗಲೇ ಡಿಜಿಟಲೀಕರಣಗೊಂಡಿದ್ದು, ಇದು ಶೇ.98.53ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು.

ಇನ್ನೂ 3,235 ನಮೂನೆಗಳು ಬಿಎಲ್‌ಒಗಳಿಗೆ ಸಲ್ಲಿಕೆಯಾಗಬೇಕಿದ್ದು, ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಮತದಾರರು ತಕ್ಷಣವೇ ನಮೂನೆಗಳನ್ನು ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಡಿಜಿಟಲೀಕರಣಗೊಂಡ ಮಾಹಿತಿಯ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 17,147 ಎಎಸ್‌ಡಿಡಿ (ASDD) ಪ್ರಕರಣಗಳು ಪತ್ತೆಯಾಗಿದ್ದು, ಅವು ಒಟ್ಟು ಮತದಾರರ ಸಂಖ್ಯೆಯ ಶೇ.7.79ರಷ್ಟಿವೆ ಎಂದು ಹೇಳಿದರು.

ಎಎಸ್‌ಡಿಡಿ ವಿವರದಲ್ಲಿ ಗೈರು (Absent) ಮತದಾರರು 1,283, ಶಾಶ್ವತವಾಗಿ ವಲಸೆ ಹೋದವರು (Shifted) 8,108, ಮೃತಪಟ್ಟವರು (Dead) 5,517, ಪುನರಾವರ್ತಿತ ಹೆಸರುಗಳು (Duplicate) 2,224 ಹಾಗೂ ಇತರೆ ಕಾರಣಗಳಿಂದ 15 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ವಲಸೆ ಎಂದು ಗುರುತಿಸಲ್ಪಟ್ಟಿರುವ ಮತದಾರರು ವಾಸ್ತವವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲೇ ವಾಸಿಸುತ್ತಿದ್ದು ತಮ್ಮ ಹೆಸರನ್ನು ಇಲ್ಲಿಯೇ ಮುಂದುವರಿಸಬೇಕೆಂದಿದ್ದರೆ, ಆಗಸ್ಟ್ 8ರವರೆಗೆ ಅವಕಾಶವಿದೆ. ಸಂಬಂಧಿಸಿದವರು ಬಿಎಲ್‌ಒ ಅಥವಾ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರ ಹೆಸರನ್ನು ಪರಿಶೀಲಿಸಿ ಪಟ್ಟಿಯಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಗಸ್ಟ್ 8ರ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಅದರ ನಂತರವೂ ನಮೂನೆ-6 ಸಲ್ಲಿಸುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು. ಹಾಗೆಯೇ ಹೆಸರು, ವಿಳಾಸ, ಜನ್ಮ ದಿನಾಂಕ, ತಂದೆ-ತಾಯಿ ಹೆಸರು ಸೇರಿದಂತೆ ಇತರೆ ತಿದ್ದುಪಡಿಗಳಿಗಾಗಿ ನಮೂನೆ-8 ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ವಿವರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಸಹಕಾರವೂ ದೊರೆಯುತ್ತಿದ್ದು, ಪ್ರತಿ ವಾರ ಸಭೆಗಳನ್ನು ನಡೆಸಲಾಗುತ್ತಿದೆ. ಎಎಸ್‌ಡಿಡಿ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳಿಗೆ (ಬಿಎಲ್‌ಎ) ನೀಡಲಾಗಿದೆ. ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ನೇರವಾಗಿ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಅಥವಾ ಬಿಎಲ್‌ಒಗಳ ಮೂಲಕ ಮಾಹಿತಿ ನೀಡಬಹುದು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂಪೂರ್ಣ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಹಾಗೂ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಬಿಎಲ್‌ಎಗಳನ್ನು ನೇಮಕ ಮಾಡಿರುವುದರಿಂದ ಪರಿಷ್ಕರಣೆ ಕಾರ್ಯ ಇನ್ನಷ್ಟು ಸುಗಮವಾಗಿದೆ ಎಂದು ಹೇಳಿದರು.

ಪ್ರಶ್ನೋತ್ತರದಲ್ಲಿ ಹೇಳಿದ್ದೇನು?

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ್, ರಾಜಕೀಯ ಪಕ್ಷಗಳು ಬಿಎಲ್‌ಎಗಳನ್ನು ನೇಮಕ ಮಾಡಿ ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

ಮರಣ ಹೊಂದಿದ ಮತದಾರರ ಸಂಖ್ಯೆ ಹೆಚ್ಚಿರುವ ಕುರಿತು ಕೇಳಿದ ಪ್ರಶ್ನೆಗೆ, ಹಿಂದಿನ ಕೆಲ ಚುನಾವಣಾ ಸಂದರ್ಭಗಳಲ್ಲಿ ಹೆಸರುಗಳನ್ನು ಅಳಿಸದೇ ಉಳಿದಿದ್ದ ಪ್ರಕರಣಗಳಿದ್ದು, ಈಗ ಮರಣ ಪ್ರಮಾಣಪತ್ರ ಹಾಗೂ ಸ್ಥಳ ಪರಿಶೀಲನೆಯ ಆಧಾರದಲ್ಲಿ ಹೆಸರುಗಳನ್ನು ತೆಗೆದುಹಾಕುವ ಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಡೂಪ್ಲಿಕೇಟ್ ಮತದಾರರ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ ಸೇರಿದಂತೆ ಇತರೆ ಮಾಹಿತಿಗಳ ಸಾಮ್ಯತೆ ಆಧರಿಸಿ ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಪುನರಾವರ್ತಿತ ಹೆಸರುಗಳನ್ನು ಪತ್ತೆಹಚ್ಚುತ್ತದೆ. ದೇಶದ ಯಾವುದೇ ಭಾಗದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಇದ್ದರೂ ವ್ಯವಸ್ಥೆ ಗುರುತಿಸುತ್ತದೆ ಎಂದು ತಿಳಿಸಿದರು.

Submit census forms by August 8; allow names to continue on voter list: Election Officer Manjunath

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close