SUDDILIVE || SHIVAMOGGA
ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಪ್ರಕರಣ-Allegation of harassment against minor female student: POCSO case registered against college principal
ಶಿವಮೊಗ್ಗ: ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಕಾಲೇಜೊಂದರ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಯನ್ನು ನಗರದ ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಎಂದು ಗುರುತಿಸಲಾಗಿದೆ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ವಿದ್ಯಾರ್ಥಿನಿ ಜುಲೈ 18ರಂದು ಕುಟುಂಬದ ಸಂಬಂಧಿಯೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಕಾಲೇಜಿಗೆ ತೆರಳಿರಲಿಲ್ಲ. ಜುಲೈ 20ರಂದು ಕೂಡ ಕಾಲೇಜಿಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಜುಲೈ 21ರಂದು ಕಾಲೇಜಿಗೆ ತೆರಳಿದಾಗ, ಪ್ರಾಂಶುಪಾಲರು ಆಕೆಯೊಂದಿಗೆ ಹಾಗೂ ಇತರ ಕೆಲವು ವಿದ್ಯಾರ್ಥಿನಿಯರೊಂದಿಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಮುಂದೆ ಆಕೆಗೆ ಮುಜುಗರ ಉಂಟಾಗುವ ರೀತಿಯಲ್ಲಿ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಿದ್ದಲ್ಲದೆ, ಈ ಹಿಂದೆ ಕಾಲೇಜಿನ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಕೈಕುಲುಕುವುದು, ಹೆಗಲ ಮೇಲೆ ಕೈ ಹಾಕುವುದು ಹಾಗೂ ಸೊಂಟಕ್ಕೆ ಕೈ ಹಾಕುವುದು ಸೇರಿದಂತೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಾಂಶುಪಾಲರ ಈ ರೀತಿಯ ವರ್ತನೆ ಪ್ರಥಮ ಪಿಯುಸಿಯಿಂದಲೂ ಮುಂದುವರಿದಿತ್ತು ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಆಗಸ್ಟ್ 18ರಂದು ವಿದ್ಯಾರ್ಥಿನಿಯಿಂದ ಹೇಳಿಕೆ ಪಡೆದುಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಕುರಿತು ಮಕ್ಕಳ ರಕ್ಷಣ ಸಮಿತಿಯೂ ಸಹ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ಪರಿಶೀಲಿಸಿದ ನಂತರ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣ ಪೋಕ್ಸೊ ಮತ್ತು ಅಟ್ರಾಸಿಟಿ ಪ್ರಕರಣವಾಗಿದ್ದರಿಂದ ಡಿಸಿಆರ್ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
