ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು

SUDDILIVE || BHADRAVATHI

ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು
Ganesha, immersion


ಭದ್ರಾವತಿ:
ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಗೆ ಇಳಿದಿದ್ದ ಪದವಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ದೇವನಹಳ್ಳಿ ಸಮೀಪದ ಕೆರೆಯಲ್ಲಿ ನಡೆದಿದೆ.

ಮೃತರನ್ನು ರಾಕೇಶ್ (ತಂದೆ ಗೋಪಾಲ್) ಎಂದು ಗುರುತಿಸಲಾಗಿದೆ. ಅವರು ಪದವಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಮಾಹಿತಿ ಪ್ರಕಾರ, ರಂಗನಾಥಪುರ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲು ಭಕ್ತರು ತೆರಳಿದ್ದರು. ರಂಗನಾಥಪುರ ಪ್ರದೇಶವನ್ನು ಸ್ಥಳೀಯವಾಗಿ ಗುಂಡಪ್ಪ ಕ್ಯಾಂಪ್ ಎಂದೂ ಕರೆಯಲಾಗುತ್ತದೆ. ದೇವರಹಳ್ಳಿಗೆ ತೆರಳುವ ರಸ್ತೆಯಲ್ಲಿರುವ, ಚೌಡೇಶ್ವರಿ ದೇವಸ್ಥಾನದ ಸಮೀಪದ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸಿದ್ಧತೆ ನಡೆಸಲಾಗಿತ್ತು.

ಈ ವೇಳೆ ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಲು ರಾಕೇಶ್ ಕೆರೆಗೆ ಇಳಿದಿದ್ದರು ಎನ್ನಲಾಗಿದೆ. ಮೂರ್ತಿಯು ವಾಲಿದ ಸಂದರ್ಭದಲ್ಲಿ ರಾಕೇಶ್ ಅವರು ಆಯತಪ್ಪಿ ನೀರಿನೊಳಗೆ ಮುಳುಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗೂ ಮಾಹಿತಿ ನೀಡಲಾಗಿದೆ.

Devarahalli, visarjane

ಅಗ್ನಿಶಾಮಕ ಸಿಬ್ಬಂದಿ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿ, ಬೆಳಗಿನ ಜಾವದವರೆಗೆ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡವೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿತು. ಈ ಕಾರ್ಯಾಚರಣೆಯಲ್ಲಿ ಹೊಸಮನೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳಾದ ಆನಂದ್, ಸುರೇಶ್,  ಮಹೇಂದ್ರ, ಪ್ರಜ್ವಲ್, ಸಂತೋಷ್ ಭಾಗಿಯಾಗಿದ್ದರು. 

ನಿರಂತರ ಶೋಧದ ಬಳಿಕ ರಾಕೇಶ್ ಅವರ ಮೃತದೇಹ ಪತ್ತೆಯಾಗಿದ್ದು, ನೀರಿನಿಂದ ಹೊರತೆಗೆಯಲಾಯಿತು. ನಂತರ ಅಗತ್ಯ ಕಾನೂನು ಕ್ರಮಕ್ಕಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕೆರೆ, ಹಳ್ಳ, ನದಿ ಸೇರಿದಂತೆ ಜಲಮೂಲಗಳಿಗೆ ಇಳಿಯುವಾಗ ಸಾರ್ವಜನಿಕರು ಹಾಗೂ ಆಯೋಜಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೊಸಮನೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದು, ನಿಖರ ಕಾರಣ ಹಾಗೂ ಇತರ ವಿವರಗಳು ತನಿಖೆಯಿಂದ ತಿಳಿದುಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close