ಕಸ್ತೂರಿರಂಗನ್ ವರದಿ: ವೈಜ್ಞಾನಿಕ ಸಮೀಕ್ಷೆ ನಡೆಸಿ ಅಂತಿಮ ಪ್ರಸ್ತಾವನೆ ಸಲ್ಲಿಸಿ – ಧನಂಜಯ ಸರ್ಜಿ-Kasturirangan Report: Conduct a scientific survey and submit a final proposal – Dhananjaya Sarji

 SUDDILIVE || BANGALORE

ಕಸ್ತೂರಿರಂಗನ್ ವರದಿ: ವೈಜ್ಞಾನಿಕ ಸಮೀಕ್ಷೆ ನಡೆಸಿ ಅಂತಿಮ ಪ್ರಸ್ತಾವನೆ ಸಲ್ಲಿಸಿ – ಧನಂಜಯ ಸರ್ಜಿ-Kasturirangan Report: Conduct a scientific survey and submit a final proposal – Dhananjaya Sarji   
Kasturirangan, sarji

ಬೆಂಗಳೂರು, ಸೆ.21: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ರಾಜಕೀಯ ಮಾಡದೆ, ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ರೈತರ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಒತ್ತಾಯಿಸಿದರು.

ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿ ಅನ್ವಯ ಕರ್ನಾಟಕದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಈ ಪೈಕಿ ಸುಮಾರು 16,114 ಚದರ ಕಿ.ಮೀ. ಪ್ರದೇಶ ಈಗಾಗಲೇ ವಿವಿಧ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ವರ್ಗಗಳಡಿ ರಕ್ಷಿತವಾಗಿದೆ. ಹೀಗಾಗಿ ಉಳಿದ ಸುಮಾರು 4,500 ಚದರ ಕಿ.ಮೀ. ಪ್ರದೇಶದಲ್ಲಿ ನೈಸರ್ಗಿಕ ಅರಣ್ಯ, ಕೃಷಿಭೂಮಿ, ತೋಟ ಹಾಗೂ ಜನವಸತಿ ಪ್ರದೇಶಗಳನ್ನು ಸರ್ವೆ ನಂಬರ್ ಮಟ್ಟದಲ್ಲಿ ಭೌತಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಮತ್ತೊಂದು ರೀತಿಯ ಪರಿಸರ ಹಾನಿಗೆ ಕಾರಣವಾಗಬಾರದು ಎಂದು ಅವರು ಹೇಳಿದರು. ಶಿವಮೊಗ್ಗದಲ್ಲಿ ಸ್ಥಳೀಯವಾಗಿ ಕಲ್ಲು ಲಭ್ಯವಾಗದ ಕಾರಣ ದೂರದ ಜಿಲ್ಲೆಗಳಿಂದ ಪ್ರತಿದಿನ ಸುಮಾರು 100 ಲಾರಿಗಳಲ್ಲಿ ಕಲ್ಲು ಸಾಗಿಸಲಾಗುತ್ತಿದೆ. 200ರಿಂದ 250 ಕಿ.ಮೀ.ವರೆಗೆ ಸಾಗಾಟ ನಡೆಯುವುದರಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದ ಡೀಸೆಲ್ ಬಳಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆಯ ನಿರ್ಧಾರವೇ ಇಂಧನ ಬಳಕೆ ಹಾಗೂ ಮಾಲಿನ್ಯ ಹೆಚ್ಚಿಸುವಂತಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಭದ್ರಾ ಯೋಜನೆ ವಿಳಂಬಕ್ಕೆ ಆಕ್ಷೇಪ

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಎತ್ತುವ ವ್ಯವಸ್ಥೆಯ ಅನುಷ್ಠಾನ ವಿಳಂಬವಾಗಿರುವುದನ್ನೂ ಡಾ. ಸರ್ಜಿ ಪ್ರಸ್ತಾಪಿಸಿದರು.

ಯೋಜನೆಯ ಮೊದಲ ಹಂತದಲ್ಲಿ ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ಸಕಾಲದಲ್ಲಿ ಪೂರ್ಣಗೊಂಡಿದ್ದರೆ ಭದ್ರಾ ಜಲಾಶಯಕ್ಕೆ ಹೆಚ್ಚುವರಿ ನೀರು ಲಭ್ಯವಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಪ್ರದೇಶಗಳ ನೀರಿನ ಸಮಸ್ಯೆಗೆ ನೆರವಾಗಬಹುದಿತ್ತು ಎಂದು ಅವರು ಹೇಳಿದರು.

ಯೋಜನೆಗೆ ಸಂಬಂಧಿಸಿದ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಅರಣ್ಯ ಭೂಮಿಯ ಅನುಮತಿ ಪ್ರಕ್ರಿಯೆ 2019ರಿಂದ ಮುಂದುವರಿದು, 2026ರ ಜುಲೈ 10ರಂದು ಮೊದಲ ಹಂತದ ಅನುಮೋದನೆ ದೊರೆತಿರುವುದು ಯೋಜನೆಯ ವಿಳಂಬದ ಗಂಭೀರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.

ಇತರ ರಾಜ್ಯಗಳ ಮಾದರಿ ಪರಿಶೀಲಿಸಲು ಒತ್ತಾಯ

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಪ್ರಸ್ತುತ ಸ್ಥಿತಿಯನ್ನು ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಾ. ಸರ್ಜಿ ಹೇಳಿದರು.

ಕೇರಳ ತನ್ನ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 13,108 ಚದರ ಕಿ.ಮೀ.ಯಿಂದ 9,993.7 ಚದರ ಕಿ.ಮೀ.ಗೆ ಪರಿಷ್ಕರಿಸಿದ್ದು, ಮತ್ತಷ್ಟು ಪರಿಷ್ಕರಣೆಯ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಗೋವಾ ಮತ್ತು ಗುಜರಾತ್‌ನಲ್ಲಿ ಪ್ರದೇಶ ನಿಗದಿಗೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರಿದಿದ್ದು, ಮಹಾರಾಷ್ಟ್ರದ ಪರಿಷ್ಕೃತ ಪ್ರಸ್ತಾವನೆ ಕೇಂದ್ರದ ತಜ್ಞ ಸಮಿತಿಯ ಪರಿಶೀಲನೆಯಲ್ಲಿದೆ ಎಂದು ಅವರು ಉಲ್ಲೇಖಿಸಿದರು.

ಕರ್ನಾಟಕದ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಂತಿಮ ಒಮ್ಮತ ಇನ್ನೂ ಮೂಡಿಲ್ಲ. ಹೀಗಾಗಿ ಇತರ ರಾಜ್ಯಗಳು ಆಕ್ಷೇಪಣೆ, ಪರ್ಯಾಯ ನಕ್ಷೆ ಹಾಗೂ ಭೌತಿಕ ಪರಿಶೀಲನೆಯ ಮೂಲಕ ತಮ್ಮ ಪ್ರಸ್ತಾವನೆಗಳನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕವೂ ನೆಲಮಟ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ಸ್ಪಷ್ಟವಾದ ಅಂತಿಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ಮಾಜಿ ಅರಣ್ಯ ಮಹಾನಿರ್ದೇಶಕ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಪಶ್ಚಿಮಘಟ್ಟದ ಆರು ರಾಜ್ಯಗಳ ಆಕ್ಷೇಪಣೆ ಹಾಗೂ ಪರ್ಯಾಯ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

“ನಾವು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಪಶ್ಚಿಮಘಟ್ಟ ಉಳಿಯಬೇಕು, ಕಾಡು ಬೆಳೆಯಬೇಕು, ನದಿಗಳು ಉಳಿಯಬೇಕು, ವನ್ಯಜೀವಿಗಳು ರಕ್ಷಿಸಲ್ಪಡಬೇಕು. ಆದರೆ ಕಾಡನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ರೈತರ ಬದುಕನ್ನೂ ಉಳಿಸಬೇಕು. ಜನರ ಬದುಕು ಮತ್ತು ಭಾವನೆಗಳ ಜೊತೆ ರಾಜಕೀಯ ಮಾಡದೆ, ಕಾಡನ್ನೂ ಉಳಿಸೋಣ–ರೈತರನ್ನೂ ಉಳಿಸೋಣ” ಎಂದು ಡಾ. ಧನಂಜಯ ಸರ್ಜಿ ಹೇಳಿದರು.

Kasturirangan Report: Conduct a scientific survey and submit a final proposal – Dhananjaya Sarji  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close