SUDDILIVE || SHIVAMOGGA
ವಾಣಿಶ್ರೀ ಆತ್ಮಹತ್ಯೆ ಪ್ರಕರಣ: ಬ್ಲ್ಯಾಕ್‌ಮೇಲ್ ಆರೋಪದಡಿ ಅಭಿಷೇಕ್ ಬಂಧನ-Vanishree suicide case: Abhishek arrested on blackmail charges
ಬೆಂಗಳೂರು: ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವತಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ಎ.ಕೆ.ನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರೋಡಿ ಗ್ರಾಮದ ವಾಣಿಶ್ರೀ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್-1ರ ಪಿಜಿಯಲ್ಲಿ ವಾಸವಿದ್ದು, ಜ್ಯುವೆಲರಿ ಶೋರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಪಿಯುಸಿಯಲ್ಲಿ ವಾಣಿಶ್ರೀ ಅವರ ಸಹಪಾಠಿಯಾಗಿದ್ದ ಶಿವಮೊಗ್ಗ ಮೂಲದ ಅಭಿಷೇಕ್, ಅವರ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಇಟ್ಟುಕೊಂಡು ವಾಟ್ಸಾಪ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.
ತನ್ನನ್ನು ಭೇಟಿಯಾಗಲು ಬರದಿದ್ದರೆ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರಿಂದ ವಾಣಿಶ್ರೀ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅಗಸರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಡೆತ್‌ನೋಟ್ ಆಧರಿಸಿ ಪ್ರಕರಣ
ಆಗಸ್ಟ್ 22ರಂದು ವಾಣಿಶ್ರೀ ಪಿಜಿಯಿಂದ ಹೊರಟ ಬಳಿಕ, ಆಕೆಯ ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿತ್ತು. ರೂಮ್‌ಮೇಟ್ ಈ ಕುರಿತು ತಕ್ಷಣ ವಾಣಿಶ್ರೀ ಅವರ ಸಹೋದರಿ ಪೂಜಾ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಗಸರ ಕೆರೆಯಲ್ಲಿ ವಾಣಿಶ್ರೀ ಅವರ ಮೃತದೇಹ ಪತ್ತೆಯಾಗಿತ್ತು.
ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಅಭಿಷೇಕ್ ನೀಡಿದ ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಕಾರಣ ಎಂದು ವಾಣಿಶ್ರೀ ಉಲ್ಲೇಖಿಸಿದ್ದರೆಂದು ತಿಳಿದುಬಂದಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೂಡ ಅವರು ಬರೆದಿದ್ದರು ಎನ್ನಲಾಗಿದೆ.
ಮೃತರ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ತನಿಖೆಯ ಮುಂದುವರಿದ ಭಾಗವಾಗಿ ಅಭಿಷೇಕ್‌ನನ್ನು ಬಂಧಿಸಲಾಗಿದೆ.
ತುಮರಿಯಲ್ಲಿ ನಿರಂತರ ಹೋರಾಟ
ವಾಣಿಶ್ರೀ ಸಾವಿಗೆ ಕಾರಣನಾಗಿದ್ದಾನೆಂದು ಆರೋಪಿಸಲಾದ ಅಭಿಷೇಕ್‌ನ ಬಂಧನಕ್ಕೆ ಆಗ್ರಹಿಸಿ, ಸಾವಿನ ದಿನದಿಂದಲೇ ಶಿವಮೊಗ್ಗ ಜಿಲ್ಲೆಯ ತುಮರಿ ಭಾಗದಲ್ಲಿ ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ಕರೂರು ನೇತೃತ್ವದಲ್ಲಿ ನಿರಂತರವಾಗಿ ಪ್ರತಿಭಟನೆ ಹಾಗೂ ಹೋರಾಟ ನಡೆಸಲಾಗುತ್ತಿತ್ತು.
ಶಾಸಕ ಗೋಪಾಲಕೃಷ್ಣ ಬೇಳೂರು, ಅನಿತಾ ಕುಮಾರಿ ಸೇರಿದಂತೆ ವಿವಿಧ ಗಣ್ಯರು ವಾಣಿಶ್ರೀ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯವೂ ಕೇಳಿಬಂದಿತ್ತು.
ನಿರಂತರ ಪ್ರತಿಭಟನೆ, ಕುಟುಂಬಸ್ಥರ ಒತ್ತಾಯ ಹಾಗೂ ಪೊಲೀಸ್ ಇಲಾಖೆಯ ತನಿಖೆಯ ಹಿನ್ನೆಲೆಯಲ್ಲಿ ಇದೀಗ ಅಭಿಷೇಕ್ ಬಂಧನವಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
