SUDDILIVE || SHIVAMOGGA
ಮಧು ಬಂಗಾರಪ್ಪ ವಿರುದ್ಧ ಏಕವಚನ ಬಳಕೆ: ರಾಘವೇಂದ್ರ ಬಹಿರಂಗ ಕ್ಷಮೆಯಾಚಿಸಬೇಕು–ನಾಗರಾಜ್ ಗೌಡ-Singular use against Madhu Bangarappa: Raghavendra should publicly apologize – Nagaraj Gowda
ಶಿಕಾರಿಪುರ: ಬಿಜೆಪಿ ಸಭೆಯೊಂದರಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿ ತೇಜೋವಧೆ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಶಿಕಾರಿಪುರ ತಾಲೂಕು ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರು ಮಧು ಬಂಗಾರಪ್ಪ ಅವರ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಸ್ತೂರಿರಂಗನ್ ವರದಿ ಕುರಿತು ಶಿಕಾರಿಪುರ ತಾಲೂಕಿನ 12 ಗ್ರಾಮಗಳ ಜನರಲ್ಲಿ ಆತಂಕವಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ನಾಗರಾಜ್ ಗೌಡ ಹೇಳಿದರು.
ಈಸೂರು ಗ್ರಾಮದಲ್ಲಿ ನಡೆದ ಪಾದಯಾತ್ರೆ ಹಾಗೂ ಸಭೆಯಲ್ಲಿ ಮಧು ಬಂಗಾರಪ್ಪ ಅವರು, ಕಸ್ತೂರಿರಂಗನ್ ವರದಿ ಜಾರಿಯಾದರೆ ಗ್ರಾಮಗಳನ್ನು ತೊರೆಯಬೇಕಾಗುತ್ತದೆ ಎಂಬ ಆತಂಕ ಬೇಡ. ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಗ್ರಾಮಸ್ಥರ ಹಿತ ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಅವರು ತಿಳಿಸಿದರು.
ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ, ಅವರದೇ ಪಕ್ಷದ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ನಾಗರಾಜ್ ಗೌಡ ಟೀಕಿಸಿದರು. ಈ ವಿಚಾರದಲ್ಲಿ ತಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಘವೇಂದ್ರ ಅವರು ಮಧು ಬಂಗಾರಪ್ಪ ವಿರುದ್ಧ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದೇ ವೇಳೆ, ಶಿಕಾರಿಪುರ ತಾಲೂಕಿನ ಕೆರೆಗಳಿಗೆ ಏತ ನೀರಾವರಿ ಯೋಜನೆಗಳನ್ನು ಕೈಗೊಂಡಿರುವುದನ್ನು ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಹಣದಿಂದ ಮಾಡಿಸಿದಂತೆ ಬಿಂಬಿಸುತ್ತಿದ್ದಾರೆ ಎಂದು ನಾಗರಾಜ್ ಗೌಡ ಆರೋಪಿಸಿದರು. ಜನರ ತೆರಿಗೆ ಹಣದಿಂದ ಸರ್ಕಾರದ ಯೋಜನೆಗಳ ಮೂಲಕ ಕಾಮಗಾರಿಗಳು ನಡೆಯುತ್ತವೆ. ಆದರೆ, ಬಿಜೆಪಿ ನಾಯಕರು ಅವುಗಳ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಶಿಕಾರಿಪುರದ ಜನರು ಬಿ.ಎಸ್. ಯಡಿಯೂರಪ್ಪ ಅವರನ್ನು ಹಲವು ಬಾರಿ ಶಾಸಕರಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಅದೇ ರೀತಿ ಬಿ.ವೈ. ರಾಘವೇಂದ್ರ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹಲವು ಬಾರಿ ಆಯ್ಕೆ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರನ್ನೂ ಶಿಕಾರಿಪುರದ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಈ ನಾಯಕರ ರಾಜಕೀಯ ಸಾಧನೆಗಳಿಗೆ ಜನರ ಮತವೇ ಪ್ರಮುಖ ಕಾರಣವಾಗಿದೆ ಎಂದು ನಾಗರಾಜ್ ಗೌಡ ಹೇಳಿದರು.
ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಮಲೆನಾಡಿನ ಜನರ ಆತಂಕ ನಿವಾರಿಸುವುದು ಹಾಗೂ ಗ್ರಾಮಸ್ಥರ ಹಿತ ಕಾಪಾಡುವುದು ಪ್ರಮುಖವಾಗಬೇಕು. ಈ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳ ಬದಲು ಜನರ ಪರವಾಗಿ ಸ್ಪಷ್ಟ ನಿಲುವು ಅಗತ್ಯ ಎಂದು ಅವರು ಒತ್ತಾಯಿಸಿದರು.
ಬಗರ್ ಹುಕುಂ ಹಕ್ಕುಪತ್ರ ವಿಚಾರ: ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ಆರೋಪ
ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ನೀಡಿರುವ ವಿಚಾರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮಾಡಿರುವ ಹೇಳಿಕೆಗಳಿಗೆ ಅಂಕಿಅಂಶಗಳ ಸಮೇತ ಉತ್ತರ ನೀಡುವುದಾಗಿ ಶಿಕಾರಿಪುರ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ ಹೇಳಿದ್ದಾರೆ.
ಫಾರಂ ನಂಬರ್ 50, 53 ಹಾಗೂ 57ರ ಅಡಿಯಲ್ಲಿ ಒಟ್ಟು ಸುಮಾರು 45,551 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಕೇವಲ 4,110 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರೆತಿದೆ ಎಂದು ಹೇಳಿದರು. ಉಳಿದಂತೆ ಸುಮಾರು 40,866 ಅರ್ಜಿಗಳು ತಿರಸ್ಕೃತವಾಗಿವೆ ಎಂದು ಆರೋಪಿಸಿದರು.
ಶಿಕಾರಿಪುರ ಕ್ಷೇತ್ರದಲ್ಲಿ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು, ಉಪಮುಖ್ಯಮಂತ್ರಿಗಳು ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಅವಧಿಯಲ್ಲಿಯೂ ಹೆಚ್ಚಿನ ಸಂಖ್ಯೆಯ ಬಗರ್ ಹುಕುಂ ಅರ್ಜಿಗಳು ತಿರಸ್ಕೃತವಾಗಿವೆ. ಈ ಕುರಿತು ತಮ್ಮ ಬಳಿ ದಾಖಲೆಗಳಿದ್ದು, ಅವುಗಳನ್ನು ಸಾರ್ವಜನಿಕರ ಮುಂದಿಡುವುದಾಗಿ ನಾಗರಾಜ್ ಗೌಡ ಹೇಳಿದರು.
3,928 ಕುಟುಂಬಗಳ ಜಮೀನು ಅರಣ್ಯಕ್ಕೆ ಸೇರಿಸಿದ ಆರೋಪ
2022ರಲ್ಲಿ ಶಿಕಾರಿಪುರ, ಸೊರಬ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ದರಖಾಸ್ತು ಹಾಗೂ ಬಗರ್ ಹುಕುಂ ಕಾಯ್ದೆಯಡಿ ಮಂಜೂರಾತಿ ಪಡೆದು ಪಹಣಿ-ಖಾತೆ ಹೊಂದಿದ್ದ ಕುಟುಂಬಗಳ ಜಮೀನುಗಳನ್ನು ಅರಣ್ಯ ಪ್ರದೇಶಕ್ಕೆ ಸೇರಿಸುವ ಪ್ರಕ್ರಿಯೆ ನಡೆದಿದೆ ಎಂದು ಅವರು ಆರೋಪಿಸಿದರು.
ತಮ್ಮ ಹೇಳಿಕೆಯ ಪ್ರಕಾರ, ಸುಮಾರು 3,928 ಕುಟುಂಬಗಳಿಗೆ ಸೇರಿದ 4,090 ಹೆಕ್ಟೇರ್ ಜಮೀನು ಅರಣ್ಯಕ್ಕೆ ಸೇರಿಸುವ ಕ್ರಮ ಕೈಗೊಳ್ಳಲಾಗಿದ್ದು, ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು ಎಂದು ನಾಗರಾಜ್ ಗೌಡ ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಪಡೆದು ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಜನರಲ್ಲಿ ಈ ಬೆಳವಣಿಗೆ ಆತಂಕ ಮೂಡಿಸಿದೆ ಎಂದು ಅವರು ತಿಳಿಸಿದರು.
ಶಿಕಾರಿಪುರದಲ್ಲಿ 600ಕ್ಕೂ ಹೆಚ್ಚು ಕುಂದುಕೊರತೆ ಅರ್ಜಿಗಳು
ಇತ್ತೀಚೆಗೆ ಶಿಕಾರಿಪುರ ತಾಲೂಕಿನಲ್ಲಿ ನಡೆದ ‘ಪ್ರಜಾಸೇವಾ’ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅರ್ಜಿಗಳು ಶಿಕಾರಿಪುರದಿಂದ ಬಂದಿವೆ ಎಂದು ನಾಗರಾಜ್ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನಷ್ಟು ಸಮಯ ನೀಡಿದ್ದರೆ ಅರ್ಜಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು ಎಂದು ಅವರು ಹೇಳಿದರು.
ಶಿಕಾರಿಪುರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿರುವವರು, ಸಾರ್ವಜನಿಕರಿಂದ ಇಷ್ಟೊಂದು ಸಂಖ್ಯೆಯಲ್ಲಿ ಕುಂದುಕೊರತೆ ಅರ್ಜಿಗಳು ಬಂದಿರುವುದನ್ನು ಗಮನಿಸಬೇಕು ಎಂದು ನಾಗರಾಜ್ ಗೌಡ ಹೇಳಿದರು.
‘ರೈತರ ಪರವಾಗಿ ಸಚಿವರು ಬರುವುದನ್ನು ಪ್ರಶ್ನಿಸಲಾಗುತ್ತಿದೆ’
ಇತ್ತೀಚೆಗೆ ಬಿಜೆಪಿ ಮುಖಂಡರಾದ ಬಿ.ವೈ. ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರಕ್ಕೆ ಕಾಂಗ್ರೆಸ್ ನಾಯಕರು ಬಂದು ರೈತರ ಪರವಾಗಿ ಕಾರ್ಯಕ್ರಮ ನಡೆಸುತ್ತಿರುವ ಕುರಿತು ಮಾತನಾಡಿರುವುದು ರಾಜಕೀಯ ಹತಾಶೆಯ ಪ್ರತಿಬಿಂಬ ಎಂದು ನಾಗರಾಜ್ ಗೌಡ ಆರೋಪಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ವಿಜಯೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಶಿಕಾರಿಪುರ ತಾಲೂಕು ತಮ್ಮ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಶಿಕಾರಿಪುರಕ್ಕೆ ಬಂದು ಜನರ ಸಮಸ್ಯೆಗಳನ್ನು ಆಲಿಸಿ ನೆರವು ನೀಡುವುದನ್ನು ಪ್ರಶ್ನಿಸುವ ಮನೋಭಾವ ಸರಿಯಲ್ಲ ಎಂದು ನಾಗರಾಜ್ ಗೌಡ ಹೇಳಿದರು.
‘ಶಿಕಾರಿಪುರಕ್ಕೆ ಯಾರೂ ಬಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ನೆರವು ನೀಡಬಾರದು’ ಎಂಬ ರೀತಿಯ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಯಾವುದೇ ಜನಪ್ರತಿನಿಧಿಯ ಜವಾಬ್ದಾರಿ ಎಂದರು.
