SUDDILIVE || SHIVAMOGGA
ತಹಶೀಲ್ದಾರ್ ವಾಹನಕ್ಕೆ ಐ20 ಕಾರು ಡಿಕ್ಕಿ; ಚೇಸ್ ಮಾಡಿ ಡಿಸಿ ಕಚೇರಿ ಎದುರು ಕಾರು ತಡೆದು ಹೈಡ್ರಾಮಾ-An i20 car collided with the Tahsildar's vehicle; a chase ensued and the car was stopped in front of the DC office, creating a dramatic scene.
ಶಿವಮೊಗ್ಗ: ನಗರದ ನೆಹರೂ ರಸ್ತೆಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅವರ ಕಚೇರಿ ಬಳಕೆಯ ಬೊಲೆರೋ ವಾಹನಕ್ಕೆ ಐ20 ಕಾರೊಂದು ಡಿಕ್ಕಿ ಹೊಡೆದು, ಸ್ಥಳದಿಂದ ತೆರಳಿದ ಘಟನೆಗೆ ಸಂಬಂಧಿಸಿದಂತೆ ಡಿಸಿ ಕಚೇರಿ ಎದುರು ಕೆಲಕಾಲ ಹೈಡ್ರಾಮಾ ನಡೆಯಿತು.
ನೆಹರೂ ರಸ್ತೆಯಲ್ಲಿ ತಹಶೀಲ್ದಾರ್ ಅವರ ಬೊಲೆರೋ ವಾಹನ ಸಂಚರಿಸುತ್ತಿದ್ದ ವೇಳೆ ಐ20 ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ಬಳಿಕ ಕಾರು ನಿಲ್ಲಿಸದೆ ಮುಂದೆ ಸಾಗಿದ್ದರಿಂದ ತಹಶೀಲ್ದಾರ್ ವಾಹನದ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕೊನೆಗೆ ಡಿಸಿ ಕಚೇರಿ ಎದುರು ಐ20 ಕಾರನ್ನು ತಡೆದು ನಿಲ್ಲಿಸಲಾಗಿದೆ.
ಈ ವೇಳೆ ಕಾರು ಚಾಲಕನೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಆತನಿಗೆ ಸ್ಥಳದಲ್ಲಿದ್ದ ಕೆಲವರು ಥಳಿಸಿದ್ದಾರೆ ಎನ್ನಲಾಗಿದೆ. ಡಿಸಿ ಕಚೇರಿ ಎದುರೇ ಘಟನೆ ನಡೆದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಜನರು ಜಮಾಯಿಸಿದ್ದರು.
ಥಳಿತಕ್ಕೊಳಗಾದ ಕಾರು ಚಾಲಕ, ತಾನು ಕಾರಿನಿಂದ ಕೆಳಕ್ಕಿಳಿಯಲು ಹೇಳಿದರೂ ಕಾರಿನಒಳಗೆ ಇರುವುದಾಗಿ ಹೇಳಿಕೊಂಡು, “ನನಗೆ ಹೊಡೆದವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಿರಿ” ಎಂದು ಪೊಲೀಸರ ಮುಂದೆ ಒತ್ತಾಯಿಸಿದ್ದಾನೆ. ಅಲ್ಲದೆ, ತನಗೆ ಸಂಸದರು ಹಾಗೂ ಶಾಸಕರು ಪರಿಚಯವಿದ್ದಾರೆ ಎಂದು ಹೇಳಿಕೊಂಡು, ಕಾರನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸುವುದಾಗಿ ಹೇಳಿ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ.
ಕಾರು ಚಾಲಕನನ್ನು ಶಿರಾಳಕೊಪ್ಪದ ಮಂಜಣ್ಣ ಎಂದು ಗುರುತಿಸಲಾಗಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಸಮಾಧಾನಪಡಿಸಿದ್ದಾರೆ. ಬಳಿಕ ಆತನನ್ನು ಹತ್ತಿರದ ಜಯನಗರ ಠಾಣೆಗೆ ಕಳುಹಿಸಲಸಲಾಗಿದೆ ಎಂದು ತಿಳಿದುಬಂದಿದೆ.
ಡಿಸಿ ಕಚೇರಿಯ ಎದುರು ನಡೆದ ಈ ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಪ್ರಕರಣ ದಾಖಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
