SUDDILIVE || SHIVAMOGGA
ರೈತರು ಹಾಗೂ ವಿದ್ಯಾರ್ಥಿಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತಮ ವೇದಿಕೆ-A good platform for knowledge exchange between farmers and students
ಶಿವಮೊಗ್ಗ: ರೈತರು ಹಾಗೂ ಕೃಷಿ ವಿದ್ಯಾರ್ಥಿಗಳ ನಡುವೆ ಜ್ಞಾನ ಮತ್ತು ಅನುಭವ ವಿನಿಮಯಕ್ಕೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯಪಟ್ಟರು.
ಶಿವಮೊಗ್ಗ ತಾಲೂಕಿನ ಕುಂಸಿ ಹೋಬಳಿಯ ಬಾಳೆಕೊಪ್ಪ ವ್ಯಾಪ್ತಿಯ ಚಿಕ್ಕಮರಸ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇದರ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಸೆ.20ರಂದು ಸಾಮಾನ್ಯ ಸಭೆಯ ಮೂಲಕ ಚಾಲನೆ ನೀಡಲಾಯಿತು.
ವಿಶ್ವವಿದ್ಯಾಲಯದ 12 ಕೃಷಿ ವಿದ್ಯಾರ್ಥಿಗಳು ಮುಂದಿನ ಮೂರು ತಿಂಗಳ ಕಾಲ ಚಿಕ್ಕಮರಸ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಗ್ರಾಮಸ್ಥರು ಮತ್ತು ರೈತರೊಂದಿಗೆ ನೇರವಾಗಿ ಬೆರೆಯುವ ಮೂಲಕ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಅವಧಿಯಲ್ಲಿ ವಿವಿಧ ಬೆಳೆ ತಳಿಗಳ ಪರಿಚಯ ಹಾಗೂ ಪ್ರಾತ್ಯಕ್ಷಿಕೆ, ಬೆಳೆ ಪ್ರಾತ್ಯಕ್ಷಿಕೆ, ಗುಂಪು ಚರ್ಚೆಗಳು, ಕೃಷಿ ವಸ್ತು ಪ್ರದರ್ಶನ, ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ, ಕೈತೋಟ ನಿರ್ಮಾಣ, ಮಾಹಿತಿ ಕೇಂದ್ರ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದರ ಜೊತೆಗೆ ರೈತರಿಗಾಗಿ ಮಣ್ಣು ಪರೀಕ್ಷೆ, ನೀರು ಪರೀಕ್ಷೆ, ಬೀಜೋಪಚಾರ ಸೇರಿದಂತೆ ವಿವಿಧ ಕೃಷಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವುದು. ಗ್ರಾಮದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಶಿಬಿರಗಳನ್ನೂ ಆಯೋಜಿಸಲಾಗುತ್ತದೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಅಗತ್ಯ ಕೃಷಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.
ಚಿಕ್ಕಮರಸ ಗ್ರಾಮದಲ್ಲಿ ಪ್ರಮುಖವಾಗಿ ಬೆಳೆಯುವ ಅಡಿಕೆ, ಭತ್ತ, ಶುಂಠಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಗುಂಪು ಚರ್ಚೆಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಧರ್ಮಪ್ಪ ಉದ್ಘಾಟಿಸಿ ಮಾತನಾಡಿ, “ಕೃಷಿ ವಿದ್ಯಾರ್ಥಿಗಳಿಗೆ ನಮ್ಮ ಅನುಭವವನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳೋಣ” ಎಂದರು.
ಗ್ರಾಮದ ಬುದ್ಧಿವಂತರಾದ ಪಿ. ಮಲ್ಲೇಶಪ್ಪ ಮಾತನಾಡಿ, “ರೈತರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳು ರೈತರಿಗೆ ತಮ್ಮ ಜ್ಞಾನವನ್ನು ಧಾರೆ ಎರೆಯುವ ಅವಕಾಶ ಇದಾಗಿದೆ” ಎಂದು ಹೇಳಿದರು.
ಶಿಬಿರದ ರೂಪುರೇಷೆಗಳು ಹಾಗೂ ಕೈಗೊಳ್ಳಲಿರುವ ವಿವಿಧ ಚಟುವಟಿಕೆಗಳ ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಕುಮಾರ್ ರೈತರೊಂದಿಗೆ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಂ.ಎನ್.ಎಂ. ಮಲ್ಲೇಶಪ್ಪ, ಎ.ಕೆ. ಮಲ್ಲೇಶಪ್ಪ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
