SUDDILIVE || SHIVAMOGGA
ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ಹಾಡಿನ ವಿಚಾರಕ್ಕೆ ಗಲಾಟೆ; ಮನೆಗೆ ನುಗ್ಗಿ ರಾಡ್‌ನಿಂದ ಹಲ್ಲೆ ಆರೋಪ-Shivamogga: Ruckus over song during Ganesh immersion; Accused of breaking into house and assaulting with rod
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಸುಡಿ ಫಾರಂ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹಾಡು ಹಾಕುವ ವಿಚಾರಕ್ಕೆ ಆರಂಭವಾದ ಗಲಾಟೆ ಬಳಿಕ ಮನೆಗೆ ನುಗ್ಗಿ ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ ಆರೋಪದ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 18ರಂದು ಹಸುಡಿ ಫಾರಂ ಗ್ರಾಮದಲ್ಲಿ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿತ್ತು. ರಾತ್ರಿ ಸುಮಾರು 9.30ರ ವೇಳೆಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸೌಂಡ್ ಸಿಸ್ಟಮ್‌ನಲ್ಲಿ ಹಾಡು ಹಾಕುವ ವಿಚಾರಕ್ಕೆ ಅಜಯ್ ಎಂಬಾತ ಮತ್ತು ಕೆಲವರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೌಂಡ್ ಸಿಸ್ಟಮ್‌ಗೆ ಹಾಡು ಹಾಕಲು ಬಳಸುತ್ತಿದ್ದ ಮೊಬೈಲ್ ಫೋನ್‌ನ್ನು ಅಜಯ್ ಕಸಿದುಕೊಂಡು ಹೋಗಿದ್ದಾನೆ. ಬಳಿಕ ಮೆರವಣಿಗೆಯಲ್ಲಿದ್ದವರು ಮೊಬೈಲ್ ಹಿಂದಿರುಗಿಸುವಂತೆ ಬುದ್ಧಿವಾದ ಹೇಳಿದಾಗ ಮಾತಿಗೆ ಮಾತು ಬೆಳೆದು ಅಜಯ್ ಮತ್ತು ದೂರುದಾರರ ಪುತ್ರನ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಎಲ್ಲರೂ ಮನೆಗೆ ತೆರಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅಜಯ್, ಆತನ ಪತ್ನಿ ಹಾಗೂ ತಾಯಿ ಮೂವರು ದೂರುದಾರರ ಮನೆ ಬಳಿ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಜಯ್ ಮನೆಗೆ ನುಗ್ಗಿ ದೂರುದಾರರ ಕಿರಿಯ ಪುತ್ರ ಜಯಕುಮಾರ್‌ನನ್ನು ಹೊರಗೆ ಎಳೆದುಕೊಂಡು ಬಂದಿದ್ದು, ಸ್ಟೀಲ್ ರಾಡ್‌ನಿಂದ ಆತನ ಎಡಗಣ್ಣಿನ ಹುಬ್ಬಿನ ಬಳಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಡೆಯಲು ಹೋದ ದೂರುದಾರನ ಹಣೆಯ ಭಾಗಕ್ಕೂ ರಾಡ್‌ನಿಂದ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಸರಸ್ವತಿ ಸುಬ್ರಮಣಿ ಎಂಬುವರಿಗೆ ಮಹಿಳೆಯೊಬ್ಬರು ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮತ್ತೊಬ್ಬರಾದ ಪ್ರದೀಪ್ ಅವರಿಗೂ ಅಜಯ್ ರಾಡ್‌ನಿಂದ ಹೊಡೆಯಲು ಮುಂದಾದಾಗ ಗಾಯವಾಗಿದೆ ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಗಾಯಗೊಂಡವರನ್ನು ಆಟೋ ಹಾಗೂ ಬೈಕ್‌ಗಳಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಜಯಕುಮಾರ್‌ಗೆ ಹೆಚ್ಚಿನ ಗಾಯವಾಗಿದ್ದು, ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 308/2026ರಡಿ ಸೆಪ್ಟೆಂಬರ್ 19ರಂದು ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳ ಅಡಿಯಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಅಜಯ್, ಇಬ್ವರು ಮಹಿಳೆಯರನ್ನ ಆರೋಪಿಗಳಾಗಿ ದಾಖಲಿಸಲಾಗಿದೆ.
Shivamogga: Ruckus over song during Ganesh immersion; Accused of breaking into house and assaulting with rod
