SUDDILIVE || SHIVAMOGGA
ಸಾಗರದಲ್ಲಿ ಅಮಾನವೀಯ ಕೃತ್ಯ: ಕಡಿಮೆ ಅಂಕ ಪಡೆದಿದ್ದಕ್ಕೆ ಪುಟ್ಟ ಮಕ್ಕಳಿಗೆ ರಕ್ತ ಬರುವಂತೆ ಥಳಿತ- Inhumane act in Sagara: Young children beaten until they bled for scoring low marks. 
ಸಾಂಧರ್ಭಿಕ ಚಿತ್ರ

ಸಾಗರ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಎಂಬ ಕಾರಣಕ್ಕೆ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕಿಯೊಬ್ಬರು ಕೋಲಿನಿಂದ ಮನಬಂದಂತೆ ಥಳಿಸಿರುವ ಆರೋಪ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕೇಳಿಬಂದಿದೆ.
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ರಕ್ಷಿತಾ ಎಂಬ ಅತಿಥಿ ಶಿಕ್ಷಕಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯಲ್ಲಿ 2, 3 ಮತ್ತು 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಕಿ ಕೋಲಿನಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಶಿಕ್ಷಕಿ ಮಕ್ಕಳ ಬೆನ್ನಿಗೆ ಮನಬಂದಂತೆ ಹೊಡೆದಿದ್ದು, ಹೊಡೆತದ ತೀವ್ರತೆಗೆ ಬಾಸುಂಡೆ ಎದ್ದು, ರಕ್ತ ಬರುವಷ್ಟು ಗಾಯಗಳಾಗಿವೆ ಎಂದು ಪೋಷಕರು ತಿಳಿಸಿದ್ದಾರೆ.
ಶಾಲೆ ಮುಗಿಸಿ ಮನೆಗೆ ತೆರಳಿದ ಬಳಿಕ ಮಕ್ಕಳ ಬೆನ್ನಿನ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಘಟನೆ ತಿಳಿದು ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಶಿಕ್ಷಕಿಯಿಂದಲೇ ಇಂತಹ ಅಮಾನವೀಯ ವರ್ತನೆ ನಡೆದಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಮಕ್ಕಳ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ನಡೆಸುವುದು ಶಿಕ್ಷಣದ ಭಾಗವಲ್ಲ. ವಿದ್ಯಾರ್ಥಿಗಳ ತಪ್ಪು ಅಥವಾ ಕಡಿಮೆ ಅಂಕಗಳಿಗೆ ಶಿಕ್ಷೆ ನೀಡುವ ಬದಲು ಅವರಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಘಟನೆ ಕುರಿತು ಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಸಂಬಂಧಪಟ್ಟ ಶಿಕ್ಷಕಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳಿಂದ ಹಾಗೂ ಪೋಷಕರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಪುಟ್ಟ ಮಕ್ಕಳ ಮೇಲೆ ನಡೆದಿರುವ ಆರೋಪಿತ ಹಲ್ಲೆ ಪ್ರಕರಣ ಇದೀಗ ಸಾಗರ ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ