ಶಾಂತಿನಗರದಲ್ಲಿ ಸಹೋದರತೆಗೆ ಸಾಕ್ಷಿಯಾದ ಸೌಹಾರ್ದಯುತ ಗಣೇಶೋತ್ಸವ-A harmonious Ganesh festival witnessed brotherhood in Shantinagar

 SUDDILIVE || SHIVAMOGGA

ಶಾಂತಿನಗರದಲ್ಲಿ ಸಹೋದರತೆಗೆ ಸಾಕ್ಷಿಯಾದ ಸೌಹಾರ್ದಯುತ ಗಣೇಶೋತ್ಸವ-A harmonious Ganesh festival witnessed brotherhood in Shantinagar
Ragigudda, ganeshotsava

ಶಿವಮೊಗ್ಗ: ನಗರದ ಶಾಂತಿನಗರ–ರಾಗಿಗುಡ್ಡ ಪ್ರದೇಶದಲ್ಲಿ ಅದ್ದೂರಿ ಹಾಗೂ ಶಾಂತಿಯುತವಾಗಿ ಗಣೇಶೋತ್ಸವದ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಿತು. ಶಾಂತಿನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಒಟ್ಟು 16 ಗಣಪತಿ ಮೂರ್ತಿಗಳು ಏಕಕಾಲದಲ್ಲಿ ಮೆರವಣಿಗೆಯಲ್ಲಿ ಸಾಗಿದವು.

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸೌಹಾರ್ದತೆಯ ಮನೋಭಾವದ ದೃಶ್ಯಗಳು ಕಂಡುಬಂದವು. ಮುಸ್ಲಿಂ ಸಮುದಾಯದವರು ಹಿಂದೂ ಬಾಂಧವರಿಗೆ ಸಿಹಿ ಹಾಗೂ ತಂಪು ಪಾನೀಯ ವಿತರಿಸಿ, ಗಣೇಶೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಪರಸ್ಪರ ಸಹಕಾರದೊಂದಿಗೆ ಹಬ್ಬವನ್ನು ಆಚರಿಸಿದ್ದು, ಪ್ರದೇಶದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರ ಮಾರ್ಗದರ್ಶನದಲ್ಲಿ ಮೆರವಣಿಗೆ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್‌ಪಿ ಸಂಜೀವಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದರು. ವೃತ್ತ ನಿರೀಕ್ಷಕ ರಾಘವೇಂದ್ರ ಖಂಡಿಕೆ ಅವರು ಶಾಂತಿಯುತ ಮೆರವಣಿಗೆ ನಡೆಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

ಶಾಂತಿನಗರದ ಮುಖಂಡರಾದ ನಾಗರಾಜ್ (ಗಾರೆ), ಶಹಾಬುದ್ದಿನ್ ಬಾಬು, ಬಸವರಾಜ್, ಸಯ್ಯದ್ ಸಾದಿಕ್, ಮಾರುತಿ, ಶಾಂತಿನಗರ ನಾಗರಿಕ ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ, ಜಯದೇವಪ್ಪ, ವಕೀಲ ರಾಮಚಂದ್ರ, ನೂರುಲ್ಲ ಖಾನ್, ಕರವೇ ಸಾದಿಕ್, ವಿಕ್ರಂ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಣಪತಿ ಮೂರ್ತಿಗಳ ದರ್ಶನ ಪಡೆದು, ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿವಿಧ ಸಮುದಾಯಗಳ ಜನರು ಪರಸ್ಪರ ಸಹಕಾರದೊಂದಿಗೆ ಗಣೇಶೋತ್ಸವ ಆಚರಿಸಿದ್ದು, ಶಾಂತಿನಗರದ ಸೌಹಾರ್ದತೆಗೆ ಕಾರ್ಯಕ್ರಮ ಸಾಕ್ಷಿಯಾಯಿತು.

A harmonious Ganesh festival witnessed brotherhood in Shantinagar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close