SUDDILIVE || SHIVAMOGGA
ಎಸ್‌ಐಆರ್ ರಾಜಕೀಯ ಅಸ್ತ್ರವಾಗಬಾರದು: ಕೆ.ಎಸ್. ಈಶ್ವರಪ್ಪ- SIR should not become a political weapon: K.S. Eshwarappa
ಶಿವಮೊಗ್ಗ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ರಾಜಕೀಯ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿರುವುದು ದುರದೃಷ್ಟಕರ. ಎಸ್‌ಐಆರ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಜನರಲ್ಲಿ ಗೊಂದಲ ಮೂಡಿಸಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅದೇ ವೇಳೆ ಮತದಾರರ ಪಟ್ಟಿಯಲ್ಲಿ ಮೃತಪಟ್ಟವರು ಹಾಗೂ ಬೇರೆ ಜಿಲ್ಲೆ, ರಾಜ್ಯಗಳಿಗೆ ಸ್ಥಳಾಂತರಗೊಂಡವರ ಹೆಸರುಗಳು ಮುಂದುವರಿಯಬಾರದು ಎಂದರು.
ಶಿವಮೊಗ್ಗದಲ್ಲಿ ಸುಮಾರು 56 ಸಾವಿರ ಮತದಾರರು ಸ್ಥಳಾಂತರಗೊಂಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಅವರಲ್ಲಿ ಮೃತಪಟ್ಟವರೂ ಇರಬಹುದು. ಅಂತಹ ಹೆಸರುಗಳನ್ನು ಪರಿಶೀಲಿಸಿ ಪಟ್ಟಿಯಿಂದ ತೆಗೆದುಹಾಕುವುದು ಅಗತ್ಯವಲ್ಲವೇ ಎಂದು ಪ್ರಶ್ನಿಸಿದರು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮುಸ್ಲಿಂ ಹಾಗೂ ದಲಿತ ಮತದಾರರ ಹೆಸರುಗಳನ್ನು ಕೈಬಿಡುವಂತೆ ತಾವು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಇಲ್ಲದ ಮತದಾರರ ಹೆಸರುಗಳನ್ನು ಕೈಬಿಡುವಂತೆ ಮಾತ್ರ ಪತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಮುಖ್ಯಮಂತ್ರಿಗಳು ಹಲವು ವಿಚಾರಗಳಲ್ಲಿ ವಿಫಲರಾಗುತ್ತಿದ್ದು, ಅದನ್ನು ಮುಚ್ಚಿಹಾಕಲು ಎಸ್‌ಐಆರ್ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಸಾಧು–ಸಂತರ ಸಭೆಯಲ್ಲಿ ಮುಖ್ಯಮಂತ್ರಿ, ‘ನೀವೆಲ್ಲರೂ ನನ್ನ ರಾಯಭಾರಿಗಳು, ನನ್ನ ಸೇವೆ ಮಾಡಬೇಕು’ ಎಂದು ಹೇಳಿರುವುದು ಸರಿಯಲ್ಲ ಎಂದ ಅವರು, ಬಿ.ಕೆ. ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡಿರುವುದನ್ನೂ ಟೀಕಿಸಿದರು.
ಎಸ್‌ಐಆರ್ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಪ್ರಕ್ರಿಯೆಯಾಗಿದ್ದು, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕಬೇಕು. ಅದೇ ಸಂದರ್ಭದಲ್ಲಿ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಯಾರ ಹೆಸರನ್ನಾದರೂ ಮತದಾರರ ಪಟ್ಟಿಯಿಂದ ಕೈಬಿಡುವಂತೆ ಪತ್ರ ಬಂದಿದ್ದರೆ, ಅದರ ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಳ್ಳಬಾರದು. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ ಈಶ್ವರಪ್ಪ, ಹೆಸರು ಸೇರ್ಪಡೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಎಸ್‌ಐಆರ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಜನರಲ್ಲಿ ಗೊಂದಲ ಮೂಡಿಸುವುದನ್ನು ತಾವು ಉಗ್ರವಾಗಿ ಖಂಡಿಸುವುದಾಗಿ ಅವರು ಹೇಳಿದರು.

