SUDDILIVE || HOSANAGAR
ಪಶ್ಚಿಮ ಘಟ್ಟ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಅಂತಿಮ ಅಧಿಸೂಚನೆ ಹೊರಡಿಸಲು ಗಿರೀಶ್ ಆಚಾರ್ಯ ಆಗ್ರಹ-Girish Acharya demands final notification of Kasturirangan report for conservation of Western Ghats
ಇಡೀ ರಾಜ್ಯವೇ ಪಶ್ಚಿಮಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಬೇಡ ಎಂದು ಹೇಳುತ್ತಿರುವ ವೇಳೆ ಇಲ್ಲೊಬ್ಬ ಪರಿಸರ ಪ್ರೇಮಿಯೊಬ್ಬರು ಕಸ್ತೂರಿ ರಂಗನ್ ವರದಿಯನ್ನ ಯಥಾವತ್ತಾಗಿ ಶೀಘ್ರದಲ್ಲಿಯೇ ಜಾರಿಗೊಳಿಸಿ ಎಂದು ಕೇಂದ್ರ ಪರಿಸರ ಸಚಿವರಿಗೆ ಪತ್ರ ಬರೆದಿದ್ದಾರೆ.
ಹೊಸನಗರದ ಗಿರೀಶ್ ಆಚಾರ್ ಈ ಪತ್ರ ಬರೆದಿದ್ದಾರೆ. ಈ ಹಿಂದೆ ಡಿನೋಟಿಫಿಕೇಶನ್ ಪ್ರಕರಣವನ್ನ ಸುಪ್ರೀಂ ಕೋರ್ಟ್ ನಲ್ಲಿ ಫೈಟ್ ಮಾಡಿ ರದ್ದುಗೊಳಿಸಿದ್ದ ಗಿರೀಶ್ ಆಚಾರ್ ಈಗ ಕಸ್ತೂರಿ ರಂಗನ್ ವರದಿಯ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ. ರಾಜಕೀಯ ಬಣ್ಣಪಡೆದುಕೊಂಡಿದ್ದ ಕಸ್ತೂರಿ ರಂಗನ್ ವರದಿ ಆದಷ್ಟು ಜಾರಿಯಾಗಲಿ ಎಂಬುದು ಅವರ ಪತ್ರದ ಸಾರಾಂಶ
ಹೊಸನಗರ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಅಮೂಲ್ಯ ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಡಾ. ಕಸ್ತೂರಿರಂಗನ್ ವರದಿಯ ಆಧಾರದ ಮೇಲೆ ಅಂತಿಮ ಅಧಿಸೂಚನೆಯನ್ನು ವಿಳಂಬವಿಲ್ಲದೆ ಹೊರಡಿಸಬೇಕು ಎಂದು ಜನಸಂಗ್ರಾಮ ಪರಿಷತ್‌ನ ಹೊಸನಗರದ ಗಿರೀಶ್ ಆಚಾರ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 9ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ರವಾನಿಸಿರುವ ಅವರು, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
2013ರಲ್ಲಿ ಡಾ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ಸಲ್ಲಿಸಿದ ವರದಿಯಲ್ಲಿ ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ಸುಮಾರು 1.60 ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಲಾಗಿತ್ತು. ಈ ಪ್ರದೇಶಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಯೋಜನೆಗಳು ಹಾಗೂ ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜನಪ್ರತಿನಿಧಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ಬದಲು, ರೈತರು ಹಾಗೂ ಜನಸಾಮಾನ್ಯರಲ್ಲಿ ತಪ್ಪು ಮಾಹಿತಿ ಹರಡಿ ಅಂತಿಮ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಿರೀಶ್ ಆಚಾರ್ಯ ಆರೋಪಿಸಿದ್ದಾರೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ಬೇನಾಮಿ ಆಸ್ತಿಗಳು, ಗಣಿಗಾರಿಕೆ ಗುತ್ತಿಗೆಗಳು, ಕೈಗಾರಿಕಾ ಹೂಡಿಕೆಗಳು ಹಾಗೂ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಕೆಲವರು ಅಧಿಸೂಚನೆ ವಿರೋಧಿಸುತ್ತಿದ್ದಾರೆ ಎಂಬುದು ಅವರ ಆರೋಪವಾಗಿದೆ.
ಕಾವೇರಿ, ಕೃಷ್ಣಾ, ತುಂಗಾ, ಭದ್ರಾ ಹಾಗೂ ಶರಾವತಿ ಸೇರಿದಂತೆ ಹಲವು ನದಿಗಳಿಗೆ ಪಶ್ಚಿಮ ಘಟ್ಟಗಳು ಮೂಲವಾಗಿದ್ದು, ಕೋಟ್ಯಂತರ ಜನರ ಕುಡಿಯುವ ನೀರಿನ ಅಗತ್ಯ ಮತ್ತು ಕೃಷಿ ಚಟುವಟಿಕೆಗಳಿಗೆ ಆಧಾರವಾಗಿವೆ. ಅಲ್ಲದೆ, ಅರಬ್ಬಿ ಸಮುದ್ರದಿಂದ ಬೀಸುವ ಮುಂಗಾರು ಮಾರುತಗಳ ಮೇಲೆ ಪ್ರಭಾವ ಬೀರುವ ಮೂಲಕ ದೇಶದ ಮಳೆ ಹಂಚಿಕೆಯಲ್ಲಿಯೂ ಪಶ್ಚಿಮ ಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
2013-14ರಲ್ಲಿ ವರದಿ ಸಲ್ಲಿಕೆಯಾದ ಬಳಿಕವೂ ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ವಿಳಂಬವಾಗುತ್ತಿದೆ. ಈ ನಡುವೆ ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪತ್ತು ಹಾಗೂ ಭೂಮಿಯ ಅತಿಕ್ರಮಣದ ಬಗ್ಗೆ ಕಳವಳ ವ್ಯಕ್ತವಾಗಿದ್ದು, ವಿಳಂಬ ಮುಂದುವರಿದರೆ ಪರಿಸರಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ, ಜೀವವೈವಿಧ್ಯದ ಉಳಿವು, ವನ್ಯಜೀವಿಗಳ ರಕ್ಷಣೆ ಹಾಗೂ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಆಚಾರ್ಯ ಮನವಿ ಮಾಡಿದ್ದಾರೆ.
