ಲಿಂಗನಮಕ್ಕಿ ಅಣೆಕಟ್ಟೆ ಮೇಲೆ ಡ್ರೋನ್ ಹಾರಾಟ ವರದಿ: ಕೆಪಿಸಿ ಅಧಿಕಾರಿಗಳಿಂದ ಸ್ಪಷ್ಟನೆ-Report of drone flying over Linganamakki dam: Clarification from KPC officials

 SUDDILIVE || SHIVAMOGGA

ಲಿಂಗನಮಕ್ಕಿ ಅಣೆಕಟ್ಟೆ ಮೇಲೆ ಡ್ರೋನ್ ಹಾರಾಟ ವರದಿ: ಕೆಪಿಸಿ ಅಧಿಕಾರಿಗಳಿಂದ ಸ್ಪಷ್ಟನೆ-Report of drone flying over Linganamakki dam: Clarification from KPC officials    
Linganmakki, dam


ಕಾರ್ಗಲ್:
ಲಿಂಗನಮಕ್ಕಿ ಅಣೆಕಟ್ಟೆ ಹಾಗೂ ಶರಾವತಿ ಜಲವಿದ್ಯುದಾಗಾರದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 27ರ ರಾತ್ರಿ ನಿಗೂಢ ಡ್ರೋನ್ ಹಾರಾಟ ನಡೆದಿದೆ ಎಂಬ ವರದಿಯನ್ನು ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಅಧಿಕಾರಿಗಳು ನಿರಾಕರಿಸಿದ್ದಾರೆ. ಅಣೆಕಟ್ಟೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಸಾಮಾನ್ಯ ಘಟನೆ ನಡೆದಿಲ್ಲ ಎಂದು ಕೆಪಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 27ರ ರಾತ್ರಿ ಲಿಂಗನಮಕ್ಕಿ ಅಣೆಕಟ್ಟೆ ಹಾಗೂ ಜೋಗದ ಶರಾವತಿ ಕಣಿವೆಯಲ್ಲಿರುವ ಜಲವಿದ್ಯುದಾಗಾರದ ಸಮೀಪ ಡ್ರೋನ್ ಅಥವಾ ವಿಮಾನ ಹಾರಾಟ ನಡೆಸಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಕೆಪಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಅಣೆಕಟ್ಟೆ ಮತ್ತು ಜಲವಿದ್ಯುದಾಗಾರ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕೆಪಿಸಿ ಕಾರ್ಯನಿರ್ವಹಣಾಧಿಕಾರಿ ಆರ್. ಶಿವಕುಮಾರ್ ಅವರು, ಅಣೆಕಟ್ಟೆ ಪ್ರದೇಶದಲ್ಲಿ ಯಾವುದೇ ಆತಂಕಕಾರಿ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೈಗಾರಿಕಾ ಭದ್ರತಾ ಪಡೆ, ನಿವೃತ್ತ ಸೈನಿಕರ ಭದ್ರತಾ ಪಡೆ, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕೆಪಿಸಿ ನಿಗಮದ ಭದ್ರತಾ ವಿಭಾಗದ ಸಿಬ್ಬಂದಿ ನಿರಂತರವಾಗಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ, ಜೋಗದ ಶರಾವತಿ ಕಣಿವೆಯ ಕೊಳ್ಳದಲ್ಲಿರುವ ಜಲವಿದ್ಯುದಾಗಾರದ ಮೇಲ್ಭಾಗದಲ್ಲಿ ಸೆಪ್ಟೆಂಬರ್ 27ರ ರಾತ್ರಿ ಸುಮಾರು 8.30ರ ವೇಳೆಗೆ ಸರ್ಜ್ ಟ್ಯಾಂಕ್ ಸಮೀಪದಿಂದ ಡ್ರೋನ್ ಹಾರಾಟ ನಡೆಸಿರುವುದು ಕಂಡುಬಂದಿದೆ ಎಂಬ ಮಾಹಿತಿ ಕೆಪಿಸಿ ಭದ್ರತಾ ವಿಭಾಗದ ಮೂಲಗಳಿಂದ ಲಭ್ಯವಾಗಿದೆ. ಕೆಪಿಸಿ ಭದ್ರತಾ ವಿಭಾಗದ ಮುಖ್ಯ ಎಂಜಿನಿಯರ್ ಆನಂದ ಕುಮಾರ್ ಅವರು ಕೂಡ ಜಲವಿದ್ಯುದಾಗಾರದ ಮೇಲ್ಭಾಗದಲ್ಲಿ ಡ್ರೋನ್ ಹಾರಾಟ ನಡೆದಿರುವುದನ್ನು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಡ್ರೋನ್ ಹಾರಾಟದ ಉದ್ದೇಶವೇನು ಎಂಬ ಬಗ್ಗೆ ಕೆಪಿಸಿ ಅಧಿಕಾರಿಗಳು ಆಂತರಿಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಡ್ರೋನ್ ಹಾರಾಟವು ಯೂಟ್ಯೂಬರ್‌ಗಳಿಂದ ನಡೆದಿತ್ತೇ, ಪ್ರವಾಸಿಗರು ಶರಾವತಿ ಕಣಿವೆಯ ದೃಶ್ಯಗಳನ್ನು ಚಿತ್ರೀಕರಿಸಲು ಹಾರಿಸಿದ್ದರೇ ಅಥವಾ ಬೇರೆ ಯಾರಾದರೂ ಉದ್ದೇಶಪೂರ್ವಕವಾಗಿ ಡ್ರೋನ್ ಹಾರಾಟ ನಡೆಸಿದ್ದರೇ ಎಂಬ ಹಲವು ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಇದಲ್ಲದೆ, ಸಮೀಪದ ಮಾವಿನಗುಂಡಿ ಪ್ರದೇಶದಿಂದ ಶರಾವತಿ ಕಣಿವೆಯ ದೃಶ್ಯಗಳನ್ನು ಚಿತ್ರೀಕರಿಸುವ ಉದ್ದೇಶದಿಂದ ಡ್ರೋನ್ ಹಾರಿಸಲಾಗಿತ್ತೇ ಎಂಬ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಕೆಪಿಸಿ ಭದ್ರತಾ ಮೂಲಗಳು ತಿಳಿಸಿವೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ

ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಿದ್ದು, ಕೆಪಿಸಿ ನಿಗಮದ ವತಿಯಿಂದ ಡ್ರೋನ್ ಹಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಯ ಹಿನ್ನೆಲೆಯಲ್ಲಿ ಕೆಪಿಸಿ ನಿಗಮದ ಭದ್ರತಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಜಲವಿದ್ಯುದಾಗಾರ ಹಾಗೂ ಅಣೆಕಟ್ಟೆ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಲಿಂಗನಮಕ್ಕಿ ಅಣೆಕಟ್ಟೆ ಮತ್ತು ಶರಾವತಿ ಜಲವಿದ್ಯುದಾಗಾರವು ಪ್ರಮುಖ ವಿದ್ಯುತ್ ಉತ್ಪಾದನಾ ಮೂಲಸೌಕರ್ಯವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಡ್ರೋನ್ ಹಾರಾಟದಂತಹ ಘಟನೆಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಸದ್ಯ ಯಾವುದೇ ಭದ್ರತಾ ಲೋಪ ಅಥವಾ ಆತಂಕಕಾರಿ ಘಟನೆ ನಡೆದಿರುವುದು ದೃಢಪಟ್ಟಿಲ್ಲ ಎಂದು ಕೆಪಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Report of drone flying over Linganamakki dam: Clarification from KPC officials

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close