SUDDILIVE || SHIVAMOGGA
ಶೌರ್ಯ ಆನೆ ಸೇರಿ ವನ್ಯಜೀವಿಗಳ ಸಾವು: ಸೈಕಲ್ ಜಾಥಾ ರದ್ದುಪಡಿಸಲು ಪರಿಸರ ಹೋರಾಟಗಾರರ ಆಗ್ರಹ- Death of wildlife including Shaurya elephant: Environmental activists demand cancellation of cycle rally
ಶಿವಮೊಗ್ಗ: ವನ್ಯಜೀವಿ ಸಪ್ತಾಹದ ಅಂಗವಾಗಿ ಅ.4ರಂದು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿರುವ ಸೈಕಲ್ ಜಾಥಾವನ್ನು ರದ್ದುಪಡಿಸುವಂತೆ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ದಿಲೀಪ್ ನಾಡಿಗ್ ಹಾಗೂ ಪರಿಸರ ಹೋರಾಟಗಾರ ಶ್ರೀರಮೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಶಿವಮೊಗ್ಗ ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರ ಹಾಗೂ ತ್ಯಾವರೇಕೊಪ್ಪ ಸಫಾರಿಯಲ್ಲಿ ವನ್ಯಜೀವಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಉಳಿಸಿ ಎಂಬ ಘೋಷಣೆಯೊಂದಿಗೆ ಜಾಥಾ ನಡೆಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಅ.30ರಂದು ಸಕ್ರೆಬೈಲು ಆನೆ ಬಿಡಾರದಲ್ಲಿದ್ದ 32 ವರ್ಷ ವಯಸ್ಸಿನ ಶೌರ್ಯ ಎಂಬ ಆನೆ ಮೃತಪಟ್ಟಿರುವುದು ವನ್ಯಜೀವಿ ಪ್ರಿಯರು ಹಾಗೂ ಪರಿಸರ ಹೋರಾಟಗಾರರಲ್ಲಿ ನೋವು ಮೂಡಿಸಿದೆ. ಇದೇ ವೇಳೆ ತ್ಯಾವರೇಕೊಪ್ಪ ಸಫಾರಿಯಲ್ಲಿ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಕೆಲವು ತಿಂಗಳಲ್ಲಿ ವನ್ಯಜೀವಿಗಳ ಸಾವುಗಳು ಪುನರಾವರ್ತನೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಮನವಿದಾರರು ಹೇಳಿದ್ದಾರೆ. ವಿಕ್ರಾಂತ್, ಬಾಲಣ್ಣ ಸೇರಿದಂತೆ ಆನೆಗಳ ಸಾವಿನ ಘಟನೆಗಳನ್ನೂ ಉಲ್ಲೇಖಿಸಿರುವ ಅವರು, ವನ್ಯಜೀವಿಗಳ ಸಂರಕ್ಷಣೆ ಕುರಿತು ಗಂಭೀರ ಚರ್ಚೆ ನಡೆಯಬೇಕಾದ ಸಂದರ್ಭದಲ್ಲಿ ಕೇವಲ ಜಾಥಾ ಅಥವಾ ಘೋಷಣೆಗಳಿಗೆ ಸೀಮಿತವಾದ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೃತ ವನ್ಯಜೀವಿಗಳಿಗೆ ಗೌರವ ಸಲ್ಲಿಸುವ ಬದಲು ಸಂಭ್ರಮದ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಇತ್ತೀಚಿನ ವನ್ಯಜೀವಿಗಳ ಸಾವಿನ ಘಟನೆಗಳ ಹಿನ್ನೆಲೆಯಲ್ಲಿ ಇಲಾಖೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಅ.4ರ ಸೈಕಲ್ ಜಾಥಾವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ವನ್ಯಜೀವಿ ಸಪ್ತಾಹದ ಉದ್ದೇಶವೇ ವನ್ಯಜೀವಿಗಳ ಸಂರಕ್ಷಣೆ, ಅವುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಾನವ–ವನ್ಯಜೀವಿ ಸಹಬಾಳ್ವೆಯ ಅಗತ್ಯವನ್ನು ತಿಳಿಸುವುದಾಗಿದೆ. ಆದರೆ, ಇತ್ತೀಚಿನ ಸಾವುಗಳ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸುವುದರಿಂದ ವನ್ಯಜೀವಿ ಪ್ರಿಯರು ಹಾಗೂ ಪರಿಸರ ಹೋರಾಟಗಾರರ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಮನವಿದಾರರು ತಿಳಿಸಿದ್ದಾರೆ.
ಮನವಿ ಪುರಸ್ಕರಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ
ಸೈಕಲ್ ಜಾಥಾವನ್ನು ರದ್ದುಪಡಿಸುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸದೆ ಕಾರ್ಯಕ್ರಮ ಮುಂದುವರಿಸಿದರೆ, ಮುಂದಿನ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಅಂತಹ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕ್ರಮದ ಆಯೋಜಕರು ಹೊಣೆಗಾರರಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅ.2ರಂದು ಸಲ್ಲಿಸಲಾದ ಈ ಮನವಿಗೆ ದಿಲೀಪ್ ನಾಡಿಗ್ ಮತ್ತು ಪರಿಸರ ಹೋರಾಟಗಾರ ಶ್ರೀರಮೇಶ್ ಸಹಿ ಹಾಕಿದ್ದಾರೆ. ಮನವಿಯನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ.

