ಉಗ್ರ ಹೋರಾಟದ ಎಚ್ಚರಿಕೆ-ನಿಖಿಲ್ ಕುಮಾರಸ್ವಾಮಿ-Warning of violent struggle - Nikhil Kumaraswamy

 SUDDILIVE || SHIVAMOGGA

ಉಗ್ರ ಹೋರಾಟದ ಎಚ್ಚರಿಕೆ-ನಿಖಿಲ್ ಕುಮಾರಸ್ವಾಮಿ-Warning of violent struggle - Nikhil Kumaraswamy   
Nikhil, kumarswamy


ಶಿವಮೊಗ್ಗ: ಬರದಿಂದ ಒಣಗಿದ ಬೆಳೆ ವೀಕ್ಷಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ; ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ವಿಧಾನಸೌಧದ ಮುಂದೆ ಉಗ್ರ ಹೋರಾಟದ ಎಚ್ಚರಿಕೆ

ಶಿವಮೊಗ್ಗ: ಮುಂಗಾರು ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ ಕನಿಷ್ಠ ₹25 ಸಾವಿರದಿಂದ ₹30 ಸಾವಿರ ಪರಿಹಾರ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸೋಮವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತ್ಯಾಜುವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದ ಅವರು, ರೈತರ ಹೊಲಗಳಲ್ಲಿ ಒಣಗಿರುವ ಮೆಕ್ಕೆಜೋಳದ ಬೆಳೆ ಹಾಗೂ ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಈ ವರ್ಷದ ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯ ಕೊರತೆಯಿಂದ ಕೆಲವು ಪ್ರದೇಶಗಳಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಬಿತ್ತನೆ ಮಾಡಿರುವ ಕಡೆಗಳಲ್ಲಿಯೂ ಬೆಳೆಗಳು ಒಣಗುತ್ತಿವೆ. ರೈತರು ಹಿಂದೆಂದೂ ಕಾಣದಂತಹ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

ರೈತರು ಬಿತ್ತನೆ ಬೀಜ, ಗೊಬ್ಬರ, ಕೂಲಿ ಹಾಗೂ ಬೆಳೆಗಳಿಗೆ ಔಷಧ ಸಿಂಪಡಣೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಎಕರೆಗೆ ₹25 ಸಾವಿರದಿಂದ ₹30 ಸಾವಿರದವರೆಗೆ ಖರ್ಚು ಮಾಡುತ್ತಿದ್ದಾರೆ. ಆದರೆ ಬೆಳೆ ನಷ್ಟದಿಂದ ಹೂಡಿಕೆ ಮಾಡಿದ ಹಣವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗುಣಮಟ್ಟದ ಬಿತ್ತನೆ ಬೀಜ, ಯೂರಿಯಾ ಸೇರಿದಂತೆ ಅಗತ್ಯ ಗೊಬ್ಬರಗಳ ಲಭ್ಯತೆ, ಕೃಷಿ ಕಾರ್ಮಿಕರ ವೆಚ್ಚ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ರೈತರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಬೆಳೆ ನಷ್ಟದ ಜಂಟಿ ಸಮೀಕ್ಷೆಗಳನ್ನು ಕಾಲಮಿತಿಯಲ್ಲಿ ನಡೆಸಬೇಕು. ಫಸಲ್‌ ಬಿಮಾ ಯೋಜನೆಯ ಪರಿಹಾರವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗದ ಸಮಸ್ಯೆಯೂ ರೈತರನ್ನು ಕಾಡುತ್ತಿದ್ದು, ಅದರ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡುವುದರಿಂದ ಹೆಚ್ಚುವರಿ ವೆಚ್ಚವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ರಾಜ್ಯದ ಎಲ್ಲ ಬರಪೀಡಿತ ತಾಲೂಕುಗಳನ್ನು ಘೋಷಿಸಲು ಒತ್ತಾಯ

ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿಯೂ ಬರದ ಪರಿಸ್ಥಿತಿ ಇದ್ದರೂ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆಕ್ಷೇಪಿಸಿದರು. ರಾಜ್ಯದ ಬರಪೀಡಿತ ಪ್ರದೇಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದತ್ತ ಬೆರಳು ತೋರಿಸಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಕೇಂದ್ರದಿಂದ ಬರ ಪರಿಹಾರವಾಗಿ ರಾಜ್ಯಕ್ಕೆ ದೊರೆಯುವ ಪಾಲಿನ ಕುರಿತು ಮಾತನಾಡುವುದರ ಜತೆಗೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಹೇಳಿದರು.

ರೈತರ ಆತ್ಮಹತ್ಯೆ ತಡೆಯಲು ಕ್ರಮ ಕೈಗೊಳ್ಳಲಿ

ಸಾಲದ ಹೊರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹಾಗೂ ಚಕ್ರಬಡ್ಡಿಯ ಸಮಸ್ಯೆಗಳಿಂದ ರೈತರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಡಳಿತಾವಧಿಯ 14 ತಿಂಗಳಲ್ಲಿ ₹28 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ರೈತರ ಸಂಕಷ್ಟದ ಸಮಯದಲ್ಲಿ ಅಂತಹ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಚ್ಛಾಶಕ್ತಿ ಈಗಿನ ಸರ್ಕಾರಕ್ಕೂ ಇರಬೇಕು ಎಂದು ಅಭಿಪ್ರಾಯಪಟ್ಟರು.

ನಿರ್ಲಕ್ಷ್ಯ ಮುಂದುವರಿದರೆ ವಿಧಾನಸೌಧದ ಮುಂದೆ ಹೋರಾಟ

ಜೆಡಿಎಸ್ ಪಕ್ಷವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲೂ ರೈತರ ಸಮಸ್ಯೆಗಳನ್ನು ಆಲಿಸಲು ರೈತರ ಸ್ವಾಭಿಮಾನ ಯಾತ್ರೆ ನಡೆಸುತ್ತಿದೆ. ಈ ಯಾತ್ರೆಯ ಉದ್ದೇಶ ರೈತರ ನೈಜ ಪರಿಸ್ಥಿತಿಯನ್ನು ಅರಿತು ಅವರ ಪರವಾಗಿ ಧ್ವನಿ ಎತ್ತುವುದಾಗಿದೆ ಎಂದರು.

ಸರ್ಕಾರ ರೈತರ ಸಮಸ್ಯೆಗಳನ್ನು ಇದೇ ರೀತಿ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ರೈತರು ವಿಧಾನಸೌಧದ ಮುಂದೆ ಉಗ್ರ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.

ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, “ಅದನ್ನು ಕುಮಾರಣ್ಣನಿಗೆ ಬಿಡೋಣ” ಎಂದು ನಿಖಿಲ್ ಕುಮಾರಸ್ವಾಮಿ ಉತ್ತರಿಸಿರುವುದು ಗಮನ ಸೆಳೆಯಿತು.

Warning of violent struggle - Nikhil Kumaraswamy 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close