SUDDILIVE || SHIVAMOGGA
ಶಿವಮೊಗ್ಗ ನಗರಕ್ಕೆ ದಸರಾ ಆನೆಗಳ ಆಗಮನ-Arrival of the Dasara Elephants in Shivamogga City
ಶಿವಮೊಗ್ಗ: ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ಮುರ್ತಿಯನ್ನ ಹೊತ್ತು ಸಾಗಲಿರುವ ಸಕ್ರೆಬೈಲು ಆನೆ ಶಿಬಿರದ ಮೂರು ದಸರಾ ಆನೆಗಳಾದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ ಆನೆಗಳು ಶಿವಮೊಗ್ಗ ನಗರಕ್ಕೆ ಆಗಮಿಸಿವೆ. ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ.
ಪ್ರತಿವರ್ಷ ಶಿವಮೊಗ್ಗ ದಸರಾ ಉತ್ಸವದ ಅಂಗವಾಗಿ ನಗರಕ್ಕೆ ಆಗಮಿಸುವ ದಸರಾ ಆನೆಗಳನ್ನು ವಾಸವಿ ಶಾಲೆಯ ಆವರಣದಲ್ಲಿ ಇರಿಸಲಾಗುತ್ತಿತ್ತು. ಆದರೆ ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದ್ದು, ಕೋಟೆ ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮೂರು ಆನೆಗಳಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಆನೆಗಳ ಆಗಮನದ ಹಿನ್ನೆಲೆಯಲ್ಲಿ ಅವುಗಳಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಆನೆಗಳಿಗೆ ವಿಶೇಷ ಆರೈಕೆ, ಆಹಾರ ವ್ಯವಸ್ಥೆ
ದಸರಾ ಆನೆಗಳಿಗೆ ಅಗತ್ಯವಾದ ಆಹಾರವನ್ನು ಒದಗಿಸಲಾಗುತ್ತಿದ್ದು, ಬಾಳೆಗಿಡ ಹಾಗೂ ಕಬ್ಬು ಸೇರಿದಂತೆ ಆನೆಗಳಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ತರಿಸಿ ನೀಡಲಾಗುತ್ತಿದೆ. ನಗರದಲ್ಲಿ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಆನೆಗಳ ಆರೋಗ್ಯ, ಆಹಾರ ಮತ್ತು ಆರೈಕೆಗೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ವಿಜಯದಶಮಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನ ಹೊತ್ತು ಸಾಗುವ ಜವಾಬ್ದಾರಿ ಹೊಂದಿರುವ ಆನೆಗಳಿಗೆ ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಮೆರವಣಿಗೆಯಲ್ಲಿ ಸುಗಮವಾಗಿ ಪಾಲ್ಗೊಳ್ಳಲು ತಾಲೀಮು ನಡೆಸಲಾಗುತ್ತದೆ. ಜನಸಂದಣಿ, ವಾದ್ಯಮೇಳ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಆನೆಗಳನ್ನು ಸಜ್ಜುಗೊಳಿಸುವುದು ತಾಲೀಮಿನ ಪ್ರಮುಖ ಉದ್ದೇಶವಾಗಿದೆ.
ಶಾಸಕ ಚೆನ್ನಿ ಅವರಿಂದ ಪೂಜೆ
ಶಿವಮೊಗ್ಗ ನಗರಕ್ಕೆ ಆಗಮಿಸಿದ ದಸರಾ ಆನೆಗಳನ್ನು ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಬರಮಾಡಿಕೊಂಡು ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಆನೆಗಳ ಆಗಮನದೊಂದಿಗೆ ನಗರದಲ್ಲಿ ವಿಜಯದಶಮಿ ಸಂಭ್ರಮದ ಸಿದ್ಧತೆಗಳು ಮತ್ತಷ್ಟು ಚುರುಕುಗೊಂಡಿವೆ.
ಬಹದ್ದೂರ್, ಸೋಮಣ್ಣ ಹಾಗೂ ಸಾಗರ ಆನೆಗಳು ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲಾ ತರಬೇತಿ ಸಂಸ್ಥೆಯ ಆವರಣದಲ್ಲಿ ತಾಲೀಮು ನಡೆಸಲಿದ್ದು, ವಿಜಯದಶಮಿ ದಿನದಂದು ನಡೆಯುವ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
