SUDDILIVE || SHIVAMOGGA
ಬಡವರಿಗೆ ಮನೆ ಹಂಚದಿದ್ದರೆ ಮಹಾನಗರ ಪಾಲಿಕೆ ಮುತ್ತಿಗೆ, ಮಧು ಬಂಗಾರಪ್ಪ ಕಾರಿಗೂ ಮುತ್ತಿಗೆ: ಈಶ್ವರಪ್ಪ ಎಚ್ಚರಿಕೆ-If houses are not allotted to the poor, the city corporation will be besieged, Madhu Bangarappa's car will also be besieged: Eshwarappa warns
ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ವಸತಿ ಯೋಜನೆಯಡಿ ಮನೆಗಳಿಗಾಗಿ ಹಣ ಪಾವತಿಸಿ ಒಂಬತ್ತು ವರ್ಷ ಕಳೆದರೂ ಮನೆ ಸಿಗದ ಬಡವರಿಗೆ ನ್ಯಾಯ ಒದಗಿಸದಿದ್ದರೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವುದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕಾರಿಗೂ ಮುತ್ತಿಗೆ ಹಾಕಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಗಾಗಿ ಹಣ ಪಾವತಿಸಿರುವ ಬಡವರ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮನೆ ನಿರ್ಮಿಸಿ ಹಂಚಿಕೆ ಮಾಡುವ ಕುರಿತು ಸರ್ಕಾರ ಸ್ಪಷ್ಟ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
4,300 ಕುಟುಂಬಗಳಿಗೆ ಇನ್ನೂ ಸಿಗದ ಮನೆ
ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಯೋಜನೆಯಡಿ ಗೋವಿಂದಾಪುರದಲ್ಲಿ ಸುಮಾರು 3,000 ಮಂದಿ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,300 ಮಂದಿ ಹಣ ಪಾವತಿಸಿದ್ದಾರೆ. ಒಟ್ಟು 4,300 ಮಂದಿ ಮನೆಗಾಗಿ ಹಣ ಕಟ್ಟಿದ್ದು, ಒಂಬತ್ತು ವರ್ಷ ಕಳೆದರೂ ಮನೆಗಳು ದೊರೆತಿಲ್ಲ ಎಂದು ಈಶ್ವರಪ್ಪ ದೂರಿದರು.
ಸಾಮಾನ್ಯ ವರ್ಗದ ಫಲಾನುಭವಿಗಳು 80,000 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು 50,000 ರೂ. ಪಾವತಿಸಿದ್ದಾರೆ. ಕೂಲಿ ಕಾರ್ಮಿಕರು ಮನೆಗಾಗಿ ಹಣ ಹೊಂದಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೆಲವರು ಮನೆಯ ಪಾತ್ರೆಗಳನ್ನು ಮಾರಾಟ ಮಾಡಿದ್ದು, ಇನ್ನು ಕೆಲವರು ತಾಳಿಯನ್ನು ಅಡವಿಟ್ಟು ಹಣ ಹೊಂದಿಸಿದ್ದಾರೆ. ಇಂತಹ ಬಡವರ ನೋವು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಹೋರಾಟ ನಡೆಸಲಾಗಿದೆ. ಸುಮಾರು 15 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ದೂರವಾಣಿ ಕರೆ ಮಾಡಿ, ಹಣ ಪಾವತಿಸಿದ ಫಲಾನುಭವಿಗಳನ್ನು ಭೇಟಿ ಮಾಡಿ ಮನೆ ನಿರ್ಮಾಣ ಮತ್ತು ಹಂಚಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದೆ. ಅಕ್ಟೋಬರ್ 26 ಅಥವಾ 27ರಂದು ಭೇಟಿ ಮಾಡಲು ಅನುಕೂಲವಾಗುತ್ತದೆ ಎಂದೂ ತಿಳಿಸಿದ್ದೆ. ಆದರೆ ಈವರೆಗೂ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಆರೋಪಿಸಿದರು.
ಅ. 27ರಂದು ಬೃಹತ್ ಪ್ರತಿಭಟನೆ
ರಾಷ್ಟ್ರಭಕ್ತರ ಬಳಗದ ವತಿಯಿಂದ ಈಗಾಗಲೇ ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಹಣ ಪಾವತಿಸಿರುವ ಫಲಾನುಭವಿಗಳನ್ನು ಪ್ರತಿಭಟನೆಗೆ ಆಹ್ವಾನಿಸಲಾಗಿದೆ. ಅಕ್ಟೋಬರ್ 27ರಂದು ಬೆಳಿಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮೆರವಣಿಗೆ ಆರಂಭಿಸಿ ಮಹಾನಗರ ಪಾಲಿಕೆ ಕಚೇರಿಯವರೆಗೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಗಮನ ಸೆಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮನೆಗಾಗಿ ಹಣ ಪಾವತಿಸಿದವರಿಗೆ ಮನೆ ಯಾವಾಗ ನಿರ್ಮಿಸಿಕೊಡಲಾಗುತ್ತದೆ ಮತ್ತು ಯಾವಾಗ ಹಂಚಿಕೆ ಮಾಡಲಾಗುತ್ತದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವರಿಗೆ ನೇರ ಎಚ್ಚರಿಕೆ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಅಕ್ಟೋಬರ್ 27ರಂದು ಬೆಳಿಗ್ಗೆ 11ರಿಂದ 11.30ರೊಳಗೆ ಮಹಾನಗರ ಪಾಲಿಕೆ ಬಳಿ ಆಗಮಿಸಿ, ಫಲಾನುಭವಿಗಳಿಗೆ ಮನೆ ಹಂಚಿಕೆಯ ಕುರಿತು ಭರವಸೆ ನೀಡಬೇಕು. ಇದು ಕೇವಲ ಮನವಿಯಲ್ಲ, ನಮ್ಮ ಒತ್ತಾಯ ಎಂದು ಈಶ್ವರಪ್ಪ ಹೇಳಿದರು.
ಸಚಿವರು ಈ ವಿಚಾರವನ್ನು ನಿರ್ಲಕ್ಷಿಸಿದರೆ ಮುಂದಿನ ಹಂತದಲ್ಲಿ ಅವರ ಕಾರಿಗೂ ಮುತ್ತಿಗೆ ಹಾಕಲಾಗುವುದು. ಇದರಿಂದ ಉಂಟಾಗುವ ಅನಾನುಕೂಲಗಳಿಗೆ ಸಚಿವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಇ.ವಿಶ್ವಾಸ್ ಮೋಹನ್ ಜಾದವ್, ಶಂಕರ್ ನಾಯಕ್, ಕುಬೇರಪ್ಪ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
