SUDDILIVE || SHIVAMOGGA
ಶಿವಮೊಗ್ಗದಲ್ಲಿ ಮಹಿಳಾ ದಸರಾ ಸಮಾರೋಪ: ನಟಿ ಅಭಿನಯ, ಸುರಕ್ಷ ದಾಸ್ ಭಾಗಿ; ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ-Women's Dasara concludes in Shivamogga: Actress Abhinaya, Suraksha Das participate; Prize distribution to sports winners
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿ–2026ರ ವತಿಯಿಂದ ಅಕ್ಟೋಬರ್ 13ರಂದು ಆಯೋಜಿಸಿದ್ದ ಮಹಿಳಾ ದಸರಾ ಸಮಾರೋಪ ಸಮಾರಂಭವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯೊಂದಿಗೆ ನಡೆಯಿತು.
ನಗರದ ಕುವೆಂಪು ರಂಗ ಮಂಡಿರದಲ್ಲಿ ನಡೆದ ಕಿಕ್ಕಿರಿದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಅಭಿನಯ ಉದ್ಘಾಟಿಸಿ ಮಾತನಾಡಿ 21 ನೇ ಶತಮಾನದ ಮಹಿಳೆಯರು ಅಬಲೆಯರಲ್ಲ ಸಬಲೆ. ಎಲ್ಲಾ ಕ್ಷೇತ್ರದಲ್ಲಿ ತನ್ನನ್ನ ತಾನು ತೊಡಗಿಸಿ ಯಶಸ್ವಿಯಾಗಿದ್ದಾರೆ ಎಂದರು.
ಹಾಗೂ ಸರಿಗಮಪ ಖ್ಯಾತಿಯ ಸುರಕ್ಷ ದಾಸ್ ಭಾಗವಹಿಸಿದ್ದು, ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ಮಹಿಳಾ ದಸರಾ ಅಂಗವಾಗಿ ನಡೆದ ವಿವಿಧ ಚಟುವಟಿಕೆಗಳ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರ ಪ್ರತಿಭೆ, ಸಾಧನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಲಾಯಿತು.
ಮಹಿಳಾ ಸಂಘಗಳು, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈಭವ
ಸಮಾರೋಪ ಸಮಾರಂಭದ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮಹಿಳೆಯರ ಸೃಜನಶೀಲತೆ ಮತ್ತು ಸ್ಥಳೀಯ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಹಿಳಾ ದಸರಾ ಮೂಲಕ ಮಹಿಳೆಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವುದರ ಜತೆಗೆ, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಲಾಯಿತು.
ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ
ಮಹಿಳಾ ದಸರಾ ಅಂಗವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಸ್ಪರ್ಧಾಳುಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರಲ್ಲಿ ಕ್ರೀಡಾಸಕ್ತಿ, ಆತ್ಮವಿಶ್ವಾಸ, ಆರೋಗ್ಯದ ಅರಿವು ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿ–2026ರ ವತಿಯಿಂದ ಆಯೋಜಿಸಿದ್ದ ಈ ಸಮಾರೋಪ ಸಮಾರಂಭದೊಂದಿಗೆ ಮಹಿಳಾ ದಸರಾ ಕಾರ್ಯಕ್ರಮಗಳು ಮುಕ್ತಾಯಗೊಂಡವು. ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕ್ರೀಡಾ ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಮಹಿಳೆಯರ ಪ್ರತಿಭೆ ಮತ್ತು ಸಾಧನೆಗೆ ಪ್ರೋತ್ಸಾಹ ನೀಡಲಾಯಿತು. ಶಾಸಕರಾದ ಚೆನ್ನಿ, ಬಲ್ಕಿಸ್ ಬಾನು, ನಲ್ಮ್ ನ ಅನುಪಮಾ ಮೊದಲಾದವರು ಭಾಗಿಯಾಗಿದ್ದರು.
