SUDDILIVE || SHIVAMOGGA
ಮಾನಸಾಧಾರ ಟ್ರಸ್ಟ್ ನ ಶೌಚದಲ್ಲಿ ಅಪ್ರಾಪ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ-ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ-Minor found hanging in Manasadhara Trust toilet - Family members express anger against hospital
ಆಲ್ಕೊಳದ ಮಾನಸಾಧಾರ ಪುನರ್ವಸತಿ ಕೇಂದ್ರದಲ್ಲಿದ್ದ ಅಪ್ರಾಪ್ತೆಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಪೋಷಕರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಹಾ (17), ಎಂಬ ಅಪ್ರಾಪ್ತೆಯು 8 ತಿಂಗಳ ಹಿಂದೆ ಈಸೂರಿನಲ್ಲಿ ಕಾಲೇಜಿಗೆ ಹೋಗುವಾಗ ಹಾವು ನೋಡಿ ಬೆಚ್ಚಿಬಿದ್ದಿದ್ದಳು, ಓದುವ ವಿಚಾರದಲ್ಲಿ ಮಂಕಾಗಿದ್ದ ನೇಹ ಒಮ್ಮೆ ಬ್ಲೇಡ್ ನಿಂದ ಕೈ ಸಹ ಕೊಯ್ದು ಕೊಂಡಿದ್ದಳು. ಈ ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಪರೀಕ್ಷೆಯನ್ನ ಬರೆದಿರಲಿಲ್ಲ.
ಈ ಕಾರಣಕ್ಕೆ ಕಳೆದ 3 ದಿನಗಳಿಂದ ಅಪ್ರಾಪ್ತೆಯನ್ನ ಮಾನಸ ನರ್ಸಿಂಗ್ ಹೋಂಗೆ ಕರೆತಂದು ಚಿಕಿತ್ಸೆಗಾಗಿ ಔಷಧ ನೀಡಲಾಗಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆಗೆ ಆಲ್ಕೊಳ ವೃತ್ತದಲ್ಲಿರುವ ಮಾನಸಾಧಾರ ಟ್ರಸ್ಟ್ ಗೆ ನೇಹಾಳನ್ನ ಕರೆತಂದು ಸೇರಿಸಲಾಗಿತ್ತು.
ಇಂದು ಮದ್ಯಾಹ್ನದ ಹೊತ್ತಿಗೆ ಆಸ್ಪತ್ರೆಯವರು ಸಾವರ್ ಲೈನ್ ರಸ್ತೆಯಲ್ಲಿರುವ ಮಾನಸ ನರ್ಸಿಂಗ್ ಹೋಂಗೆ ಬನ್ನಿ ನೇಹಳು ಮತ್ತೆ ಕೈ ಕೊಯ್ದುಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಕುಟುಂಬ ನರ್ಸಿಂಗ್ ಹೋಂಗೆ ಬಂದಾಗ ಐಸಿಯುವಿನಲ್ಲಿ ಮೃತಳಾಗಿರುವುದಾಗಿ ತಿಳಿಸಿರುವುದಾಗಿ ಮೃತಳ ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟ್ರಸ್ಟ್ ನಿಂದ ಪೊಲೀಸರಿಗೂ ತಿಳಿಸದೆ ಸಾವರ್ ಲೈನ್ ರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆತಂದಿರುವುದೇಕೆ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ಪತ್ರೆಯವರೆ ಬೇಸಿಗೆ ಶಿಬಿರಕ್ಕೆ ಸೇರಿಸಿ ನೇಹಾ ಗುಣಮುಖರಾಗುತ್ತಾರೆ. ಧ್ಯಾನವೆಲ್ಲಾ ಕಲಿಸುತ್ತೇವೆ ಎಂದು ಭರವಸೆ ನೀಡಿದ ಕಾರಣಕ್ಕೆ ಸೇರಿಸಲಾಗಿದೆ. ಆದರೆ ನೇಹಾಳನ್ನ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿದೆ. ಬೇಸಿಗೆ ಶಿಬಿರದಲ್ಲಿ ಸಮಾನ ಮನಸ್ಕರರೊಂದಿಗೆ ನೇಹಾಳನ್ನ ಬಿಡಲಾಗುವುದು ಎಂದಿದ್ದ ಆಸ್ಪತ್ರೆಯವರು ಹುಚ್ಚರೊಂದಿಗೆ ಬಿಟ್ಟಿರುವುದಾಗಿ ಕುಟುಂಬ ಆರೋಪಿಸಿದೆ.
ಕುಟುಂಬಸ್ಥರ ಪ್ರಕಾರ ರಿಹಾಬಿಲಿಟೇಶನ್ ಶೌಚದಲ್ಲಿ ವೇಲ್ ನ್ನೇ ಉರುಳು ಮಾಡಿಕೊಂಡು ನೇಹಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿದ್ದಾರೆ. ದೊಡ್ಡಪೇಟೆ ಪೊಲೀಸರು ಹಾಗೂ ತುಂಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Minor found hanging in Manasadhara Trust toilet - Family members express anger against hospital
