ಗ್ರಾಮ ದೇವಿಗೆ ನೂತನ ಸ್ವರ್ಣ ಮುಖ ಕವಚ ಹಾಗೂ ದೇವಸ್ಥಾನಕ್ಕೆ ರಜತ ಮಹಾದ್ವಾರ ಸಮರ್ಪಣೆ-New golden shield, golden face and silver gate dedicated to Goddess Koti Marikamba of Shivamogga

 SUDDILIVE || SHIVAMOGGA

ಗ್ರಾಮ ದೇವಿಗೆ ನೂತನ ಸ್ವರ್ಣ ಮುಖ ಕವಚ ಹಾಗೂ ದೇವಸ್ಥಾನಕ್ಕೆ ರಜತ ಮಹಾದ್ವಾರ ಸಮರ್ಪಣೆ-New golden shield, golden face and silver gate dedicated to Goddess Koti Marikamba of Shivamogga       

Gold, Marikamba

ಶಿವಮೊಗ್ಗ, ಜು. 3: ಶಿವಮೊಗ್ಗದ ಆರಾಧ್ಯ ದೈವವಾದ ಕೋಟಿ ಮಾರಿಕಾಂಬಾ ದೇವಿಯ ದಿವ್ಯ ಸಾನಿಧ್ಯದಲ್ಲಿ ಪರಾಭವ ನಾಮ ಸಂವತ್ಸರದ ಜ್ಯೇಷ್ಠ ಮಾಸ ಕೃಷ್ಣಪಕ್ಷ ತದಿಗೆ ಶುಕ್ರವಾರ ಕನ್ಯಾ ಲಗ್ನದಲ್ಲಿ ದೇವಿಗೆ ನೂತನ ಸ್ವರ್ಣ ಕವಚ, ಸ್ವರ್ಣ ಮುಖ ಹಾಗೂ ಗರ್ಭಗುಡಿಯ ರಜತ ಮಹಾದ್ವಾರವನ್ನು ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಸಮರ್ಪಿಸಲಾಯಿತು.

ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಭೀಮೇಶ್ವರ ಜೋಷಿ ದಂಪತಿ ಭಾಗವಹಿಸಿ ದೇವಿಗೆ ಸಮರ್ಪಣೆ ನೆರವೇರಿಸಿದರು. ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಈ ಮಹತ್ವದ ಧಾರ್ಮಿಕ ಕಾರ್ಯವನ್ನು ನೆರವೇರಿಸಿರುವುದಾಗಿ ಅವರು ತಿಳಿಸಿದರು.

Gold, marikamba

ಈ ಸಂದರ್ಭದಲ್ಲಿ ಮಾತನಾಡಿದ ಭೀಮೇಶ್ವರ ಜೋಷಿ, "ಕೋಟಿ ಮಾರಿಕಾಂಬಾ ದೇವಿಯ ಕೃಪೆಯಿಂದ ಇಂತಹ ಮಹತ್ತರವಾದ ಕಾರ್ಯವನ್ನು ನಮ್ಮಿಂದ ಮಾಡಿಸಿಕೊಳ್ಳುವ ಸೌಭಾಗ್ಯ ದೊರೆತಿದೆ. ತಾಯಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳನ್ನು ಸಮರ್ಪಿಸುತ್ತೇವೆ. ಐನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ಶ್ರೀಧರ ಸ್ವಾಮಿಗಳು ಆಗಮಿಸಿದ್ದ ಸಂದರ್ಭದಲ್ಲಿ ದೇವಾಲಯ ನಿರ್ಮಿಸಿ ಶಾಸ್ತ್ರೋಕ್ತವಾಗಿ ಪೂಜೆ ನಡೆಯಬೇಕು ಎಂದು ಅಪ್ಪಣೆ ನೀಡಿದ್ದರು. ಅದರ ಫಲವಾಗಿ ಭಕ್ತರು ಒಂದಾಗಿ ಸುಂದರ ದೇವಾಲಯ ನಿರ್ಮಿಸಿ ಶಿಲಾ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ. ಇದೀಗ ದೇವಿಗೆ ಸ್ವರ್ಣ ಮುಖ ಹಾಗೂ ರಜತ ಮಹಾದ್ವಾರ ಸಮರ್ಪಿಸುವ ಪುಣ್ಯ ಕಾರ್ಯ ನೆರವೇರಿದೆ," ಎಂದು ಹೇಳಿದರು.

ಮಾರಿಕಾಂಬಾ ದೇವಿಯ ಉಗ್ರ ಸ್ವರೂಪದ ಹಿಂದಿರುವ ಮಾತೃತ್ವದ ಮಹತ್ವವನ್ನು ವಿವರಿಸಿದ ಅವರು, "ತಾಯಿಯ ಕಣ್ಣಿನಲ್ಲಿ ಉಗ್ರತೆ ಕಂಡರೂ ಅಂತರಂಗದಲ್ಲಿ ಮಾತೃತ್ವ ತುಂಬಿಕೊಂಡಿದೆ. ಭಕ್ತರು ಧರ್ಮ, ಸಂಸ್ಕಾರ ಹಾಗೂ ಭಕ್ತಿಭಾವದಿಂದ ದೇವಿಯ ಸನ್ನಿಧಿಗೆ ಬಂದರೆ ತಾಯಿ ಸದಾ ಅಭಯ ಹಸ್ತದಿಂದ ಕಾಪಾಡುತ್ತಾಳೆ. ತಪ್ಪು ದಾರಿಯಲ್ಲಿ ಸಾಗುವವರಿಗೆ ಮಾತ್ರ ಉಗ್ರ ರೂಪದ ದರ್ಶನವಾಗುತ್ತದೆ ಎಂಬ ಸಂದೇಶವನ್ನು ದೇವಿ ಸಾರುತ್ತಾಳೆ," ಎಂದರು.

ದೇವಿಯ ಅನುಗ್ರಹದಿಂದ ಲೋಕಕ್ಕೆ ಶಾಂತಿ, ಸುಖ, ಸಮೃದ್ಧಿ, ಉತ್ತಮ ಮಳೆ-ಬೆಳೆ ಹಾಗೂ ದೇಶಕ್ಕೆ ಕ್ಷೇಮ ಲಭಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿರುವ ಎಲ್ಲಾ ಭಕ್ತರಿಗೂ ತಾಯಿಯ ಕೃಪೆ ಲಭಿಸಿ ಎಲ್ಲರೂ ಸುಖ, ಶ್ರೇಯಸ್ಸು ಮತ್ತು ಮಾತೃತ್ವದ ಆಶೀರ್ವಾದ ಪಡೆಯಲಿ ಎಂದು ಪ್ರಾರ್ಥನೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಲಲಿತಾ ತ್ರಿಪುರಸುಂದರಿ ಹೋಮವನ್ನು ನೆರವೇರಿಸಿ, ಹೋಮದ ಪೂರ್ಣಾಹುತಿ ಕಲಶವನ್ನು ದೇವಿಗೆ ಸಮರ್ಪಿಸಲಾಯಿತು.

"ಲೋಕಾಃ ಸಮಸ್ತಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು" ಎಂದು ಪ್ರಾರ್ಥಿಸಲಾಯಿತು.

New golden shield, golden face and silver gate dedicated to Goddess Koti Marikamba of Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close