SUDDILIVE || SORABA
ಕುಂಬತ್ತಿ ದುರ್ಗಾಂಬಾ ದೇವಸ್ಥಾನ ಹುಂಡಿ ಕಳ್ಳತನ ಪ್ರಕರಣ: ಆರೋಪಿ ಬಂಧನ- Kumbatti Durgamba Temple Hundi Theft Case: Accused Arrested
ಸೊರಬ: ಕುಂಬತ್ತಿ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 26, 2026ರಂದು ಕುಂಬತ್ತಿ ದುರ್ಗಾಂಬಾ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿರುವ ಕುರಿತು ನೀಡಿದ ದೂರಿನ ಮೇರೆಗೆ ಸೊರಬ ಠಾಣೆಯಲ್ಲಿ ಸಿಆರ್ ನಂ.154/2026ರಂತೆ ಬಿಎನ್‌ಎಸ್ ಕಲಂ 305, 331(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆ ಹಾಗೂ ಕಳುವಾದ ಹಣದ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ಶಿಕಾರಿಪುರ ಉಪವಿಭಾಗದ ಡಿವೈಎಸ್‌ಪಿ ಕೇಶವ್ ಅವರ ನಿರ್ದೇಶನದಂತೆ ಸೊರಬ ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ಸೊರಬ ಠಾಣೆಯ ಎಂಎಚ್ ಪಿಎಸ್‌ಐ ನವೀನ್ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿ, ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ನಿವಾಸಿ ರಾಕೇಶ್ (28) ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸರ ಪ್ರಕಾರ, ರಾಕೇಶ್ ಎಂಬಾತ ನವೀನ್ ಅಲಿಯಾಸ್ ದುರ್ಗ ಎಂಬಾತನೊಂದಿಗೆ ಸೇರಿಕೊಂಡು ಸೊರಬ ತಾಲೂಕಿನ ಕುಂಬತ್ತಿ ದುರ್ಗಾಂಬಾ ದೇವಸ್ಥಾನ, ಜಂಬಾನಿ ಮಾರಿಕಾಂಬ ದೇವಸ್ಥಾನ ಹಾಗೂ ಶಿರಾಳಕೊಪ್ಪದ ಬಸನಂದಿಹಳ್ಳಿ ಚನ್ನಬಸವ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
